ರಾಜ್ಯ

ರಾಜ್ಯದ ಮೊದಲ ವಿಸ್ಟಾಡೋಮ್‌ ಕೋಚ್‌ ರೈಲು ಸಂಚಾರ ಆರಂಭ

Manjula VN

ಮಂಗಳೂರು; ಕರ್ನಾಟಕದ ಮೊದಲ ವಿಸ್ಟಾಡೋಮ್ ಕೋಚ್‌ ರೈಲಿಗೆ ಮಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಲಾಗಿದೆ. 

ಮಂಗಳೂರು–ಬೆಂಗಳೂರು ನಡುವಣ ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಲು ಅನುಕೂಲವುಳ್ಳ ವಿಸ್ಟಾಡೋಮ್‌ ರೈಲು ಸಂಚಾರಕ್ಕೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು.

ಈ ವೇಳೆ ಮಾತಾನಾಡಿರುವ ನಳಿನ್ ಕುಮಾರ್ ಕಟೀಲ್ ಅವರು, ಈ ಯೋಜನೆಗೆ ಅನುವು ಮಾಡಿಕೊಟ್ಟ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಹೇಳಿದ್ದಾರೆ. 

ಈ ಮಾರ್ಗದಲ್ಲಿ ಸುಬ್ರಮಣ್ಯ ದೇವಸ್ಥಾನವಿದೆ. ಧಾರ್ಮಿಕ ಹಾಗೂ ಪ್ರಾಕೃತಿಕ ಅನುಭವಗಳು ಪ್ರವಾಸಿಗರಿಗೆ ಖುಷಿ ಕೊಡುತ್ತದೆ. ಮಂಗಳೂರಿಗೆ 2 ಕೋಚ್ ಗಳನ್ನು ಕೊಟ್ಟಿದ್ದಾರೆ. ಇದರಲ್ಲಿ 40 ಆಸನಗಳಿವೆ. ದಿವ್ಯಾಂಗರಿಗೆ ಪ್ರತ್ಯೇಕವಾಗಿರುವ ವ್ಯವಸ್ಥೆ ಇದರಲ್ಲಿದೆ. ಮೆಟ್ರೋ ರೈಲಿನ ಹಾಗೆ ಇಲ್ಲಿ ಮಾಹಿತಿಯನ್ನು ನೀಡುವ ವ್ಯವಸ್ಥೆಯಿದೆ. ಪಯಣದಲ್ಲಿ ಪ್ರಕೃತಿಯ ದೃಶ್ಯವನ್ನು ನೋಡುತ್ತಾ ಫೋಟೋಗಳನ್ನು ತೆಗೆದುಕೊಂಡು ಆನಂದಿಸಬಹುದು. ಇಂತಹ ಯೋಜನೆಯನ್ನು ಸಾಕಾರಗೊಳಿಸಿದ ರೈಲ್ವೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ವಿಸ್ಟಾಡೋಮ್ ಬೋಗಿಗಳಲ್ಲಿ ಕುಳಿತು ಪಶ್ಚಿಮ ಘಟ್ಟಗಳ ಮೂಲಕ ಸಂಚರಿಸುವಾಗ ರಮಣೀಯ ಪ್ರಾಕೃತಿಕ ಸೊಬಗನ್ನು ನೋಡಬಹುದಾಗಿದೆ. ಎತ್ತರದ ಪರ್ವತಗಳ ಅದ್ಭುತ ನೋಟ, ಕಣಿವೆಗಳು, ಆಳವಾದ ಕಮರಿಗಳು ಮತ್ತು ಹಚ್ಚ ಹಸಿರಿನ ಈ ಪ್ರದೇಶವು ಮಳೆಗಾಲದ ಸಂದರ್ಭದಲ್ಲಿ ಇನ್ನಷ್ಟು ಸುಂದರ ದೃಶ್ಯಾವಳಿಗಳು ನೋಡುಗರನ್ನು ಬೆರಗುಗೊಳಿಸುತ್ತದೆ.

ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮರ್ಥ್ಯ ಇದೆ. ಅಗಲವಾದ, ದೊಡ್ಡ ಕಿಟಕಿಗಳು ಪ್ರಯಾಣಿಕರಿಗೆ ಸ್ಪಷ್ಟವಾದ ನೋಟವನ್ನು ನೀಡುತ್ತದೆ. ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್ಎಚ್‌ಪಿನಲ್ಲಿ (ಲಿಂಕೆ-ಹಾಫ್ಮನ್-ಬುಶ್ ಪ್ಲಾಟ್‌ಫಾರ್ಮ್ / ತಂತ್ರಜ್ಞಾನ) ತಯಾರಿಸಲಾಗಿದೆ. ಈ ಬೋಗಿಗಳು ಗಾಜಿನ ಮೇಲ್ಚಾವಣಿ ಹೊಂದಿದೆ.

ಬೋಗಿಯಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಸ್ಟೀಲ್ ಲಗೇಜ್ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳಿವೆ. ಕೋಚ್ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಜೈವಿಕ ಶೌಚಾಲಯಗಳನ್ನು ಹೊಂದಿದೆ.
 

SCROLL FOR NEXT