ರಾಜ್ಯ

ಹಾಸನ: ಹೆಚ್ ಆರ್ ಪಿ ಯೋಜನೆಯಡಿ ಬೋಗಸ್ ಫಲಾನುಭವಿಗಳಿಂದ ಸಾವಿರಾರು ಎಕರೆ ಸರ್ಕಾರಿ ಭೂಮಿ ಕಬಳಿಕೆ

Srinivas Rao BV

ಹಾಸನ: ಹೇಮಾವತಿ ಪುನರ್ವಸತಿ ಯೋಜನೆ (ಹೆಚ್ ಆರ್ ಪಿ) ಅಡಿಯಲ್ಲಿ ಸಾವಿರಾರು ಎಕರೆಗಳಷ್ಟು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ನಕಲಿ ಫಲಾನುಭವಿಗಳಿಗೆ ನೀಡಿರುವ ಹಗರಣ ಹಾಸನದಲ್ಲಿ ಬೆಳಕಿಗೆ ಬಂದಿದೆ. 

ಕಂದಾಯ ಇಲಾಖೆ ಅಧಿಕಾರಿಗಳು 30 ಸಾವಿರ ಎಕರೆಗಳಷ್ಟು ಭೂಮಿಯನ್ನು ಕಾಫಿ ಬೆಳೆಗಾರರು, ಪ್ರಗತಿಪರ ನಾಯಕರು, ವಿವಿಧ ರಾಜಕೀಯ ನಾಯಕರ ಅನುಯಾಯಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೇಮಾವತಿ ಪುನರ್ವಸತಿ ಯೋಜನೆ (ಹೆಚ್ ಆರ್ ಪಿ) ಅಡಿಯಲ್ಲಿ ನೀಡಿದ್ದಾರೆ. 

ಹೇಮಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಭೂಮಿಯ ಮಾಲಿಕರಿಗೆ ಪರಿಹಾರದ ರೂಪದಲ್ಲಿ ಪುನರ್ವಸತಿ ಭೂಮಿಯನ್ನು ನೀಡಲು ಹೆಚ್ ಆರ್ ಪಿ ಯೋಜನೆ ರೂಪಿಸಲಾಗಿತ್ತು. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರಾಜ್ಯ ಸರ್ಕಾರ ಎರಡು ದಶಕಗಳ ಹಿಂದೆ ಪುನರ್ವಸತಿ ಯೋಜನೆಗಾಗಿ 1050 ಎಕರೆಗಳಷ್ಟು ಭೂಮಿಯನ್ನು ಸರ್ಕಾರ ಗುರುತಿಸಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಯೋಜನೆಗಾಗಿ, ಸರ್ಕಾರಕ್ಕೆ 31 ಸಾವಿರ ಎಕರೆಯಷ್ಟು ಭೂಮಿಯನ್ನು ಗುರುತಿಸಲು ಪ್ರಸ್ತಾವನೆ ಸಲ್ಲಿಸಿದ್ದರು. 

ಅಧಿಕಾರಿಗಳು ಹಾಗೂ ಭೂಮಿ ಮಧ್ಯವರ್ತಿಗಳ ನಡುವಿನ ನಂಟಿನ ಲಾಭ ಪಡೆದ ಸಮಾಜದ ವಿವಿಧ ವರ್ಗದ ಜನತೆ ನಕಲಿ ದಾಖಲೆಗಳನ್ನು ಸಲ್ಲಿಸಿ ಆಲೂರು, ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ. 

ಮೂಲಗಳ ಪ್ರಕಾರ 2500 ಬೋಗಸ್ ಫಲಾನುಭವಿಗಳು ಪುನರ್ವಸತಿ ಯೋಜನೆಯಡಿ ಲಾಭ ಪಡೆದಿದ್ದಾರೆ. ಈ ಹಗರಣದ್ಲಲಿ ತಹಶೀಲ್ದಾರರು, ಕಂದಾಯ ಅಧಿಕಾರಿಗಳು, ವಿಶೇಷ ಭೂ ಸ್ವಾಧೀನ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಶಾಮೀಲಾಗಿದ್ದಾರೆ. 

ಡಿ.ಸಿ ಆರ್ ಗಿರೀಶ್ ಸಹಾಯಕ ಆಯುಕ್ತ ಹೆಚ್ಎಲ್ ನಾಗರಾಜ್ ಅವರ ನೇತೃತ್ವದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿಯನ್ನು ನೇಮಕ ಮಾಡಿದ್ದು ವಿವರವಾದ ವರದಿಯನ್ನು ಸಲ್ಲಿಸಲು ಸೂಚನೆ ನೀಡಿದ್ದಾರೆ.

ವಿಶೇಷ ಭೂ ಸ್ವಾಧೀನ ಅಧಿಕಾರಿಗಳಾದ ವಿಜಯ, ಬಿಎ ಜಗದೀಶ್, ರವಿಚಂದ್ರ ನಾಯ್ಕ್, ಕ್ಯಾಪ್ಟನ್ ಶ್ರೀನಿವಾಸ ಗೌಡ ಅವರುಗಳೂ ಹಗರಣದಲ್ಲಿ ಶಾಮೀಲಾಗಿದ್ದಾರೆ. ಇದೇ ವೇಳೆ ತನಿಖಾಧಿಕಾರಿಗಳು 2360 ನಕಲಿ ಫಲಾನುಭವಿಗಳಿಗೆ ಯೋಜನೆಯಡಿ ನೀಡಲಾಗಿರುವ 9440 ಎಕರೆಗಳಷ್ಟು ಭೂಮಿಯ ರದ್ದತಿಗೆ ಶಿಫಾರಸು ಮಾಡಿದ್ದಾರೆ. ಈ ವರದಿಯನ್ನಾಧರಿಸಿ ಜಿಲ್ಲಾಧಿಕಾರಿಗಳು ಹಗರಣದಲ್ಲಿ ಶಾಮೀಲಾದ ಆರೋಪದಡಿ ಮೂವರು ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಮಧ್ಯವರ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದದ್ದು ಇದೇ ವೇಳೆ ಬೆಳಕಿಗೆ ಬಂದಿದೆ. 

- ಉದಯ್ ಕುಮಾರ್ ಬಿಆರ್

SCROLL FOR NEXT