ರಾಜ್ಯ

ವಯನಾಡಿನಲ್ಲಿ ಭಾರೀ ಮಳೆ: ಕಬಿನಿ ಜಲಾಶಯದ ನೀರಿನ ಮಟ್ಟ ಏರಿಕೆ; ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ

Shilpa D

ಮೈಸೂರು: ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಈಗಾಗಲೇ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ. ಒಳ ಹರಿವಿನ ಪ್ರಮಾಣವು 19,632 ಕ್ಯುಸೆಕ್‌ಗೆ ಏರಿಕೆಯಾಗಿದೆ. 2,284 ಗರಿಷ್ಠ ಅಡಿಯ ಈ ಜಲಾಶಯವು 2,280.22 ಅಡಿಗೆ ತಲುಪಿದೆ. ನದಿಗೆ 8,552 ಕ್ಯುಸೆಕ್‌ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ.

ಈ ಪ್ರದೇಶವು ಸಾಕಷ್ಟು ಮಳೆಯಾಗುತ್ತಿರುವುದರಿಂದ ಒಳಹರಿವು ಯಾವುದೇ ಸಮಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಹೀಗಾಗಿ ನೀರಾವರಿ ಅಧಿಕಾರಿಗಳು ಒಳಹರಿವಿನ ಮೇಲೆ ನಿಗಾ ವಹಿಸುತ್ತಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮ  ಕೈಗೊಳ್ಳುವಂತೆ ಕೇರಳ ರಾಜ್ಯದ ಜಲ ಸಂಪನ್ಮೂಲ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
 
ಕಬಿನಿ ಜಲಾಶಯದ ಹಿನ್ನೀರಿನಲ್ಲಿರುವ ಹಳ್ಳಿಗಳಿಗೆ ಸಂಕಷ್ಟ ಎದುರಾಗಿದೆ. ಡಿ.ಬಿ.ಕುಪ್ಪೆಯಿಂದ ಕೇರಳ ರಾಜ್ಯದ ಹಳ್ಳಿಗಳಿಗೆ ದೋಣಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ಕಳೆದ ಎರಡು ವರ್ಷಗಳಿಂದ ಪ್ರವಾಹದ ಸಂದರ್ಭದಲ್ಲಿ ಹೆಚ್ಚು ಹಾನಿಗೊಳಗಾದ ಡಿಬಿ ಕುಪ್ಪೆ ಗ್ರಾಮಸ್ಥರು ಹತ್ತಿರದ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು ಹಾರಂಗಿ ಅಣೆಕಟ್ಟಿನಿಂದ ನೀರನ್ನು ಹೊರಬಿಡುತ್ತಿರುವ ಕಾರಣ ಕೆಆರ್‌ಎಸ್‌ ನ ಒಳಹರಿವು ಹೆಚ್ಚಾಗಿದೆ.

ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟವು 90.6 ಅಡಿಗಳಷ್ಟಿದೆ,  ನೀರಾವರಿ ಅಧಿಕಾರಿಗಳು 2,209 ಕ್ಯೂಸೆಕ್ ನೀರನ್ನು ಕಾಲುವೆಗೆ ಬಿಡುಗಡೆ ಮಾಡಿದ್ದಾರೆ ಮತ್ತು ಕುಶಾಲ ನಗರದ ಹಾರಂಗಿ ಅಣೆಕಟ್ಟಿನ ಕ್ರೆಸ್ಟ್ ಗೇಟ್‌ಗಳು ತೆರೆದಿರುವುದರಿಂದ ಒಳಹರಿವು ಕೂಡ ಹೆಚ್ಚಾಗುತ್ತಿದೆ.

SCROLL FOR NEXT