ರಾಜ್ಯ

ಉತ್ತರ ಕನ್ನಡ: ಪ್ರವಾಹ ಪೀಡಿತರ ರಕ್ಷಣೆಗೆ ಭಾರತೀಯ ಕರಾವಳಿ ರಕ್ಷಣಾ ಪಡೆ, ನೌಕಾದಳ; ಪ್ರವಾಹದಲ್ಲಿ ಕೊಚ್ಚಿಹೋದ ಜನ ಜೀವನ

Srinivas Rao BV

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರಕ್ಕೆ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದಲ್ಲಿ ಕೊಚ್ಚಿ ಹೋದ ಹಲವು ಮಂದಿ ಸಾವನ್ನಪ್ಪಿದ್ದಾರೆ. 

ಅಪಾಯದಲ್ಲಿ ಸಿಲುಕಿರುವ ನೂರಾರು ಮಂದಿಯನ್ನು ರಕ್ಷಿಸಲು ಭಾರತೀಯ ನೌಕಾ ದಳ ಹಾಗೂ ಭಾರತೀಯ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿಗಳು ನೆರವಿಗೆ ಧಾವಿಸಿದ್ದು ಸಿಲುಕಿದ್ದ ಜನರನ್ನು ಏರ್ಲಿಫ್ಟ್ ಮಾಡಿ ಸುರಕ್ಷಿತ ಪ್ರದೇಶಗಳಿಗೆ ಕಳಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ.

ಅಂಕೋಲಾದ ಸುಂಕಸಾಳದಲ್ಲಿ ಭಾಗಶಃ ಜಲಾವೃತಗೊಂಡಿದ್ದ ಹೊಟೆಲ್ ನಲ್ಲಿ ಸಿಲುಕಿದ್ದ 15 ಪ್ರವಾಸಿಗರನ್ನು ರಕ್ಷಿಸಲು ನೌಕಾಪಡೆ ಹೆಲಿಕಾಫ್ಟರ್ ನೆರವಾಗಿದ್ದು ಸುರಕ್ಷಿತ ಪ್ರದೇಶಗಳಿಗೆ ಅವರನ್ನು ಸ್ಥಳಾಂತರಿಸಲಾಗಿದೆ. ಖರ್ಗೆಜೋಗ ಗ್ರಾಮದಲ್ಲಿ  ಖರ್ಗೆಜೋಗ್, ಉಂಗ್ಲಿ ಜೋಗ, ಬೋಡೋಜೋಗ ದ್ವೀಪಗಳಿಂದ 161 ಮಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ. 

ಕುಮುಟದಲ್ಲಿ ಅಘನಾಶಿನಿ, ಅಂಕೋಲದಲ್ಲಿ ಗಂಗಾವಳಿ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಉಂಟಾಗಿರುವುದರಿಂದ ದಿವಗಿ, ಮಿರ್ಜನ್, ಹೆಗಡೆ ಹಾಗೂ ಕೊಡ್ಕಣಿ ಗ್ರಾಮಗಳು ಮುಳುಗಡೆಯ ಭೀತಿಯನ್ನು ಎದುರಿಸುತ್ತಿವೆ. ಈ ಗ್ರಾಮದಲ್ಲಿರುವವರನ್ನು ರಕ್ಷಣಾ ತಂಡಗಳು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿದ್ದಾರೆ. ಗಂಗಾವಳಿ ನದಿಯಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಅಂಕೋಲಾ-ಹುಬ್ಬಳ್ಳಿ ಹೆದ್ದಾರಿ ಜಲಾವೃತಗೊಂಡಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. 

ಇನ್ನು ಕಾಳಿ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ 2 ಲಕ್ಷ ಕ್ಯುಸೆಕ್ಸ್ ನಷ್ಟು ನೀರನ್ನು ಕೊಡಸಳ್ಳಿ, ಕದ್ರಾ ಜಲಾಶಯಗಳಿಂದ ಹೊರಬಿಡಲಾಗಿದೆ. 

ಈ ಜಲಾಶಯಗಳ ದಿಕ್ಕಿನಲ್ಲಿರುವ ಗ್ರಾಮಗಳಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ರಕ್ಷಣಾ ತಂಡಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ (ಹೆಚ್‌ಎಡಿಆರ್) ಹಾಗೂ ರಕ್ಷಣಾ ಕಾರ್ಯಾಚರಣೆಗಳ ತಂಡ ತುರ್ತಾಗಿ ನೆರವಿಗೆ ಧಾವಿಸಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳು ಸ್ಥಳೀಯ ಆಡಳಿತದ ಜೊತೆಗೆ ಸಂಪರ್ಕದಲ್ಲಿದ್ದು, ಐಸಿಜಿ ಪಡೆ ನಿರಂತರ ಮಳೆಯ ಪರಿಣಾಮಗಳನ್ನು ತಗ್ಗಿಸಲು, ಜನತೆಯ ಜೀವ ಉಳಿಸಲು, ನೆರವು ನೀಡಲು  ಸನ್ನದ್ಧಗೊಂಡಿದೆ ಎಂದು ಐಸಿಜಿ ವಕ್ತಾರರು ಹೇಳಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ನಾಲ್ವರು ಸಾವನ್ನಪ್ಪಿರುವ ಶಂಕೆ ಇದೆ. 24 ಗಂಟೆಗಳಲ್ಲಿ ನದಿ ಪ್ರವಾಹದಲ್ಲಿ ಇಬ್ಬರು ಕೊಚ್ಚಿಹೋಗಿದ್ದು ಇನ್ನಿಬ್ಬರು ಪ್ರತ್ಯೇಕ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಗಂಗಾವಳಿ ನದಿಯಲ್ಲಿ ರಕ್ಷಣಾಕಾರ್ಯಚರಣೆಯಲ್ಲಿ ತೊಡಗಿದ್ದ ಬೋಟ್ ತಲೆಕೆಳಗಾಗಿದ್ದು ಓರ್ವ ಮಹಿಳೆ ಹಾಗೂ ಪುರುಷ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಅವರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. 

ಶಿರೂರು ಗ್ರಾಮದ ಮೊರು ಗೌಡ (65) ಹಾಗೂ ಗಂಗಾಧರ ಗೌಡ (36) ನದಿ ತೀರಕ್ಕೆ ವಾಪಸ್ಸಾಗುತ್ತಿದ್ದಾಗ ಬೋಟ್ ಮಗುಚಿಬಿದ್ದಿದೆ. ಇದೇ ಮಾದರಿಯ ಘಟನೆ ಹೊನ್ನಾವರದಲ್ಲಿ ವರದಿಯಾಗಿದ್ದು, ಬೋಟ್ ಮಗುಚಿಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಶಿರಸಿಯಲ್ಲಿ ಓರ್ವ ದ್ವಿಚಕ್ರ ವಾಹನ ಸವಾರ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.

SCROLL FOR NEXT