ರಾಜ್ಯ

ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಶೀಘ್ರದಲ್ಲೇ ರೋಪ್ ವೇ ನಿರ್ಮಾಣ: ಸಚಿವ ಯೋಗೇಶ್ವರ್

Manjula VN

ಬೆಂಗಳೂರು: ವಿಶ್ವವಿಖ್ಯಾತ ನಂದಿ ಬೆಟ್ಟದ ಸೌಂದರ್ಯ ಮತ್ತು ಪರಿಸರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಶೀಘ್ರದಲ್ಲೇ ರೋಪ್‌ವೇ ನಿರ್ಮಾಣ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಶುಕ್ರವಾರ ಹೇಳಿದ್ದಾರೆ. 

ನಂದಿಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಪ್‌ ವೇ ನಿರ್ಮಾಣ ಕಾಮಗಾರಿಗೆ ಇನ್ನು ಹತ್ತು ದಿನದೊಳಗೆ ಟೆಂಡರ್‌ ಕರೆದು ಕಾಮಗಾರಿ ನಡೆಸಲಾಗುವುದು. ಈಗಾಗಲೇ ರೋಪ್‌ ವೇ ಸಂಬಂಧ ಸರ್ವೆ ಕಾರ್ಯ ಮತ್ತು ಮಣ್ಣು ಪರೀಕ್ಷೆಯೂ ನಡೆದಿದೆ. ಯೋಜನೆ ವೆಚ್ಚವನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಯೋಜನೆಯ ಗಾತ್ರವನ್ನು ಅನುಸರಿಸಿ ಯೋಜನೆ ವೆಚ್ಚ ನಿರ್ಧಾರಗೊಳ್ಳಲಿದೆ ಎಂದು ಹೇಳಿದ್ದಾರೆ. 

7 ಎಕರೆ ಜಮೀನುತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹೀಗೆ ಹಲವು ಇಲಾಖೆಗಳ ನಡುವೆ ಹಂಚಿಕೆಯಾಗಿತ್ತು. ಆದರೆ ಈಗ ನಂದಿಬೆಟ್ಟ ಸಂಪೂರ್ಣ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಬಂದಿದೆ. ಈಗ ನಂದಿ ತಪ್ಪಲಲ್ಲಿ ಸುಮಾರು 35 ಎಕರೆ ಪ್ರದೇಶವನ್ನು ಪ್ರವಾಸೋದ್ಯಮ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಬೆಟ್ಟದ ತಪ್ಪಲಲ್ಲಿ ವಾಹನ ನಿಲ್ದಾಣಕ್ಕಾಗಿ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ 7 ಎಕರೆಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಇಷ್ಟು ದಿನ ನಂದಿಗಿರಿಧಾಮ ವಿವಿಧ ಇಲಾಖೆಯಡಿ ಹಂಚಿ ಹೋಗಿತ್ತು. ಇದರಿಂದ ನಂದಿಗಿರಿಧಾಮದ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ಇದೀಗ ಅಭಿವೃದ್ಧಿ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆ ಕೈಗೆತ್ತಿಕೊಂಡಿದೆ. ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಬೆಟ್ಟದ ಮೇಲೆ ಹಾಗೂ ಕೆಳಗೆ ಅತ್ಯುತ್ತಮ ರೀತಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. 

ನಂದಿಗಿರಿಧಾಮದಲ್ಲಿ ಜನರ ನಿಯಂತ್ರಣ ಹಾಗೂ ಅಭಿವೃದ್ಧಿ ಎರಡು ಆಗಬೇಕಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕೈಗೊಳ್ಳುತ್ತೇವೆ. ಇನ್ನೊಂದು ವರ್ಷದಲ್ಲಿ ನಂದಿಗಿರಿಧಾಮ ಅಭಿವೃದ್ಧಿಯಾಗುತ್ತದೆ. ನಂದಿಗಿರಿಧಾಮಕ್ಕೆ ನಿಗದಿತ ಜನರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತೆ. ಒಂದೇ ಸಮಯದಲ್ಲಿ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರವಾಸಿಗರು ಬಂದು ಹೋಗಬೇಕು. ಇಷ್ಟು ದಿನ ಭರವಸೆಗಳನ್ನಷ್ಟೇ ನೀಡಲಾಗಿತ್ತು. ಇದೀಗ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT