ರಾಜ್ಯ

ಶಿವಮೊಗ್ಗ ಕೃಷಿ ವಿವಿಗೆ ಕೆಳದಿ ಶಿವಪ್ಪ ನಾಯಕ ಹೆಸರು: ಸಿಎಂ ಯಡಿಯೂರಪ್ಪ ಘೋಷಣೆ

Lingaraj Badiger

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿಯಲ್ಲಿ ಲೋಕಾರ್ಪಣೆ ಮಾಡಲಾದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಗೃಹ ಕಚೇರಿ ಕೃಷ್ಟಾದಲ್ಲಿ ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಗರಿಷ್ಟ ಪ್ರಯತ್ನ ಮಾಡಿದ ತೃಪ್ತಿ ನನಗಿದೆ. ನನಗೆ ರಾಜಕೀಯ ಜನ್ಮ ನೀಡಿದ ಶಿವಮೊಗ್ಗ ಜಿಲ್ಲೆಯ ಅದರಲ್ಲೂ ಶಿಕಾರಿಪುರ ತಾಲೂಕಿನ ಜನತೆಯ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ ಎಂದು ಅವರು ಭಾವುಕರಾಗಿ ಹೇಳಿದರು.

ಜಿಲ್ಲೆಯಲ್ಲಿ ರೈತರ ಹೊಲಗಳಿಗೆ ನೀರುಣಿಸುವ ನೀರಾವರಿ ಯೋಜನೆಗಳನ್ನು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಯುದ್ದೋಪಾಧಿಯಲ್ಲಿ ಅನುಷ್ಟಾನಗೊಳಿಸಲಾಗಿದೆ. ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗಳಿಗೆ ದಾಖಲೆ ಪ್ರಮಾಣದ ಅನುದಾನವನ್ನು ಒದಗಿಸಲಾಗಿದೆ. ಈ ನೀರಾವರಿ ಯೋಜನೆಗಳು ಭವಿಷ್ಯದಲ್ಲಿ ಜಿಲ್ಲೆಯ ರೈತರ ಆರ್ಥಿಕ ಚಿತ್ರಣವನ್ನೇ ಬದಲಾಯಿಸುವ ವಿಶ್ವಾಸವಿದೆ ಎಂದರು.

ಶಿವಮೊಗ್ಗ ತಾಲೂಕಿನ ಸೋಗಾನೆಯಲ್ಲಿ ಏರ್ಬಸ್ ಮಾದರಿಯ ವಿಮಾನಗಳು ಇಳಿಯಲು ಸಾಧ್ಯವಾಗುವಂತಹ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಮುಂದಿನ ಏಪ್ರಿಲ್ ವೇಳೆಗೆ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ವಿಮಾನ ನಿಲ್ದಾಣ ಆರಂಭದಿಂದ ಶಿವಮೊಗ್ಗ ಮಾತ್ರವಲ್ಲ ಸುತ್ತಲಿನ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳ ಸದುಪಯೋಗಕ್ಕೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಯನ್ನು ಸ್ಮರಣೀಯವಾಗಿಸಲು 185 ಕೋಟಿ ರೂ. ವೆಚ್ಚದಲ್ಲಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರವಾಸಿಗರನ್ನು ವರ್ಷವಿಡೀ ಆಕರ್ಷಿಸಲು ಕೆ.ಪಿ.ಟಿ.ಸಿ.ಎಲ್. ಸಹಕಾರದೊಂದಿಗೆ ಶನಿವಾರ ಹಾಗೂ ಭಾನುವಾರ ಧುಮ್ಮಿಕ್ಕುವ ಸರ್ವ ಋತು ಜೋಗ ರೂಪಿಸಲಾಗುತ್ತಿದೆ.
ಮಲೆನಾಡು, ಕರಾವಳಿ, ಬಯಲುಸೀಮೆಯ ಏಳು ಜಿಲ್ಲೆಗಳ ವ್ಯಾಪ್ತಿಗೆ ಸೀಮಿತಗೊಂಡು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಕೆಲಸ ಮಾಡುತ್ತಿದ್ದು, ಇದು ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ವಿಜ್ಞಾನ ಹೊಂದಿರುವ ರಾಜ್ಯದ ಏಕೈಕ ಸಮಗ್ರ ಹಾಗೂ ವಿಶಿಷ್ಟ ವಿಶ್ವವಿದ್ಯಾಲಯವಾಗಿದೆ. ಇದೀಗ 155 ಕೋಟಿ ರೂ. ನೂತನ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ವಿಶ್ವವಿದ್ಯಾಲಯಕ್ಕೆ 787 ಎಕರೆ ವಿಶಾಲವಾದ ಜಮೀನು ಮಂಜೂರು ಮಾಡಲಾಗಿದೆ ಎಂದರು.

ಇದೀಗ ಮತ್ತೆ ರಾಜ್ಯದ ಕೆಲವೆಡೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ನಿನ್ನೆಯಷ್ಟೆ ಶಿವಮೊಗ್ಗ ಸೇರಿ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ, ಜನರ ರಕ್ಷಣೆ, ಪರಿಹಾರ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದೇನೆ. ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ನಾಳೆ ಬೆಳಗಾವಿಗೆ ತೆರಳಲಿದ್ದೇನೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಅವರು ಸುಮಾರು 1074 ಕೋಟಿ ರೂ. ವೆಚ್ಚದ ವಿವಿಧ ಯೋಜನೆ ಕಾಮಗಾರಿಗಳ ಉದ್ಘಾಟನೆ ಮತ್ತು 560 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಹಿರಿಯ ಅಧಿಕಾರಿಗಳಾದ ರಾಜಕುಮಾರ್ ಖತ್ರಿ, ಕಪಿಲ್ ಮೋಹನ್, ಸೆಲ್ವಕುಮಾರ್, ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಗಣ್ಯರು ಹಾಜರಿದ್ದರು.

SCROLL FOR NEXT