ರಾಜ್ಯ

ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಇಳಿಸಿದರೆ ರಾಜಕೀಯ ಅಸ್ಥಿರತೆ ಎದುರಾಗಲಿದೆ: ಬಿಜೆಪಿಗೆ ಖಾವಿಧಾರಿಗಳ ಎಚ್ಚರಿಕೆ

Manjula VN

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕೆಂದು ಒಕ್ಕೋರಲ ನಿರ್ಣಯವನ್ನು ರಾಜ್ಯದ ಮಠಾಧೀಶರು ಹೈಕಮಾಂಡ್‍ಗೆ ಭಾನುವಾರ ರವಾನಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬೆಂಬಲಿಸಿ ನಗರದ ಅರಮನೆ ಮೈದಾನದಲ್ಲಿ ರಾಜ್ಯದ ವಿವಿಧ ಮಠಾಧೀಶರ ಸಮಾವೇಶ ನಡೆಸಿದ್ದು, ರಾಜ್ಯದ ವಿವಿಧ ಮಠಗಳ 450ಕ್ಕೂ ಹೆಚ್ಚು ಮಠಾಧೀಶರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಬಾಳೆಹೊಸೂರು ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ತಿಪಟೂರು ಷಡಕ್ಷರಿ ಮಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರಿನ ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ದೇವರು ಸೇರಿದಂತೆ ನೂರಾರು ಮಠಗಳ ಪೀಠಾಧ್ಯಕ್ಷರು ಅರಮನೆ ಮೈದಾನದಲ್ಲಿ ದುಂಡು ಮೇಜಿನ ಪರಿಷತ್ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ಆಗ್ರಹಿಸಿದರು.

ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.16-17ರಷ್ಟು ಜನ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಯಡಿಯೂರಪ್ಪ ಅವರೂ ಕೂಡ ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯ ಪ್ರಬಲ ಸಮುದಾಯವಾಗಿದೆ. ಸಂಸದೀಯ ಚುನಾವಣೆ, 2018 ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು. 

ನಿನ್ನೆ ನಡೆದ ಸಮಾವೇಶವನ್ನು ಯಡಿಯೂರಪ್ಪ ಅವರ ಬೆಂಬಲಿಗರು ಆಯೋಜಿಸಿದ್ದು, ಸಮಾವೇಶದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬದಲಾಯಿಸಬಾರದು, ಹುಟ್ಟು ಹೋರಾಟಗಾರನ ಸ್ವಾಭಿಮಾನಕ್ಕೆ ಧಕ್ಕೆ ತರಬಾರದು. ಸರ್ವರ ಶ್ರೇಯೋಭಿವೃದ್ಧಿಗೂ ಶ್ರಮಿಸಿ ಸಮರ್ಥವಾಗಿ ಆಡಳಿತ ನಡೆಸುತ್ತಿರುವುದರಿಂದ ಅಧಿಕಾರವಧಿ ಪೂರ್ಣಗೊಳಿಸಲು ಬಿಜೆಪಿ ಹೈಕಮಾಂಡ್‌ ಅವಕಾಶ ಮಾಡಿಕೊಡಬೇಕು ಎಂಬ ಒಕ್ಕೊರಲ ನಿರ್ಣಯವನ್ನು ಮಠಾಧೀಶರು ಕೈಗೊಂಡರು. 

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಬಿಜೆಪಿ ಉನ್ನತ ನಾಯಕರು ಗಮನಿಸುತ್ತಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಠಾಧೀಶರ ಸಂಖ್ಯೆ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. 

ಸಮಾವೇಶ ಕುರಿತು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಬಿ.ಸೋಮಶೇಖರ್ ಅವರು ತೀವ್ರ ಕಿಡಿಕಾರಿದ್ದಾರೆ. 

ವೃತ್ತಿಪರ ಕಾಲೇಜುಗಳನ್ನು ಸ್ವಾಧೀನಪಡಿಸಿಕೊಂಡಿರುವ ಮಠಗಳು ಪ್ರಜಾಪ್ರಭುತ್ವವನ್ನೂ ಸ್ವಾಧೀನಪಡಿಸಿಕೊಳ್ಳುವ ಸಮಯ ಬರಬಹುದು ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ. 

SCROLL FOR NEXT