ರಾಜ್ಯ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಬಾಕಿ ಜಿಎಸ್​ಟಿ ಬಗ್ಗೆ ಕೇಳುತ್ತೇನೆ: ಸಿಎಂ ಬೊಮ್ಮಾಯಿ

Manjula VN

ನವದೆಹಲಿ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿಗೆ ತೆರಳಿದ್ದು, ರಾಷ್ಟ್ರ ರಾಜಧಾನಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಗೆ ಕೆಲ ಸಲಹೆಗಳನ್ನು ಪಡೆದುಕೊಂಡಿದ್ದಾರೆ. 

ಸುದ್ದಿಗಾರರೊಂದಿಗೆ ಇಂದು ಮಾತನಾಡಿರುವ ಬೊಮ್ಮಾಯಿಯವರು, ಇಂದು (ಜುಲೈ 31) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ. ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ಚರ್ಚೆ ಮಾಡುತ್ತೇನೆಂದು ಹೇಳಿದ್ದಾರೆ.

ವಿತ್ತ ಸಚಿವರ ಭೇಟಿ ವೇಳೆ ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ ಬರುವ ಅನುದಾನದ ಬಗ್ಗೆ ಕೇಳುತ್ತೇನೆ. ರಾಜ್ಯಕ್ಕೆ ಬರಬೇಕಾದ ಬಾಕಿ ಜಿಎಸ್​ಟಿ ಬಗ್ಗೆಯೂ ಚರ್ಚಿಸುತ್ತೇನೆಂದು ತಿಳಿಸಿದ್ದಾರೆ. 

ಇದೇ ವೇಳೆ ಸಚಿವ ಸಂಪುಟ ರಚನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದೇನೆ. ನಾಯಕರು ಕರೆದರೆ ಹೋಗಿ ಈ ಬಗ್ಗೆ ಚರ್ಚಿಸುತ್ತೇನೆ. ಮಧ್ಯಾಹ್ನದೊಳಗೆ ಲಿಸ್ಟ್ ಬರುತ್ತೋ, ಇಲ್ಲವೋ ಗೊತ್ತಿಲ್ಲ. ಹೈಕಮಾಂಡ್ ನಿಂದ ನನಗೆ ಇನ್ನೂ ಕರೆಯೇ ಬಂದಿಲ್ಲ. ಕರೆ ಬಂದ ಕೂಡಲೇ ಪಟ್ಟಿಯ ಬಗ್ಗೆ ಚರ್ಚೆ ಮಾಡುವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನೂ ಭೇಟಿಯಾಗುವುದಾಗಿ ತಿಳಿಸಿದ ಅವರು, ಹಲವು ವಿಚಾರಗಳ ಬಗ್ಗೆ ಜೋಶಿಯವರ ಜತೆ ಚರ್ಚಿಸಬೇಕಿದೆ ಎಂದಿದ್ದಾರೆ.

SCROLL FOR NEXT