ರಾಜ್ಯ

ಹೆಚ್ಚುವರಿ ವಿದ್ಯುತ್ ಒಪ್ಪಂದ ಮೂಲಕ ಮಾರಾಟಕ್ಕೆ ಕ್ರಮ: ಮುಖ್ಯಮಂತ್ರಿ ಸೂಚನೆ

Raghavendra Adiga

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಬೇಡಿಕೆಗಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೀರ್ಘಾವಧಿ ಒಪ್ಪಂದದ ಮೂಲಕ ಮಾರಾಟಕ್ಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ರಾಜ್ಯದ ವಿದ್ಯುತ್ ಪೂರೈಕೆ ಸ್ಥಿತಿ ಗತಿ ಹಾಗೂ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಿಎಂ ಈ ಕುರಿತು ಚರ್ಚಿಸಿದರು.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯ 30,562.56 ಮೆಗಾವ್ಯಾಟ್ ನಷ್ಟಿದ್ದು, ಶೇ. 50 ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಕೊರತೆ ಇರುವುದಿಲ್ಲ. ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರು ಇರುವುದರಿಂದ ಹಾಗೂ ಈ ಬಾರಿ ಮುಂಗಾರು ಸಾಮಾನ್ಯವಾಗಿರುವುದು ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕೊರತೆಯಾಗದು ಎಂದು ಅಧಿಕಾರಿಗಳು ವಿವರಿಸಿದರು.

ವಿದ್ಯುತ್ ಪ್ರಸರಣ ಜಾಲದಲ್ಲಿ ವಿದ್ಯುತ್ ಸೋರಿಕೆ ಅತಿ ಕಡಿಮೆ ಅಂದರೆ ಸುಮಾರು ಶೇ. 3 ರಷ್ಟು ಇದ್ದು, ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ವಿತರಣಾ ಜಾಲದಲ್ಲಿಯೂ ವಿದ್ಯುತ್ ಸೋರಿಕೆ ಶೇ. 5ಕ್ಕಿಂತ ಕಡಿಮೆಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನೀರಾವರಿ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ಪೂರೈಕೆಗೆ ಅನುವಾಗುವಂತೆ ಸ್ಟೇಷನ್ ಗಳು ಹಾಗೂ ಫೀಡರ್ ಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, 2022ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳಲಿದೆ. ಪ್ರಸ್ತುತ 26 ಸ್ಟೇಷನ್ ಗಳು ಹಾಗೂ 182 ಫೀಡರುಗಳ ಕಾಮಗಾರಿ ಪೂರ್ಣಗೊಂಡಿದೆ.

ರಾಜ್ಯದ ಒಟ್ಟಾರೆ ವಿದ್ಯುತ್ ಬಳಕೆಯ ಶೇ. 18 ರಷ್ಟು ಕೈಗಾರಿಕೆಗಳಿಗೆ ಬಳಕೆಯಾಗುತ್ತಿದೆ. ಕೈಗಾರಿಕೆಗಳಿಗೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಲ್ಲಿ ತಲೆದೋರುವ ತೊಡಕುಗಳನ್ನು ನಿವಾರಿಸಲು ಕೈಗಾರಿಕಾ ಇಲಾಖೆ ಹಾಗೂ ಇಂಧನ ಇಲಾಖೆ ಅಧಿಕಾರಿಗಳು ಕಾಲ-ಕಾಲಕ್ಕೆ ಸಭೆ ನಡೆಸಿ, ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್. ಪ್ರಸಾದ್, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

SCROLL FOR NEXT