ರಾಜ್ಯ

ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ನಿಧನ: ಗಣ್ಯರ ಸಂತಾಪ

Sumana Upadhyaya

ಕಲಬುರಗಿ: ಕನ್ನಡದ ಹಿರಿಯ ಬರಹಗಾರ, ಕವಿ ಪ್ರೊ. ವಸಂತ ಕುಷ್ಟಗಿ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರಿಗೆ 85 ವರ್ಷ ವಯಸ್ಸಾಗಿತ್ತು.

ತೀವ್ರ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರನ್ನು ವಾರದ ಹಿಂದೆ ಗುಲ್ಬರ್ಗಾ ಹಾರ್ಟ್ ಫೌಂಡೇಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕನ್ನಡ ಪುಸ್ತಕಲೋಕಕ್ಕೆ ತಮ್ಮ ಅನನ್ಯ ಕಾವ್ಯ ಪ್ರತಿಭೆಯಿಂದ ಮಹತ್ವದ ಕೊಡುಗೆ ಕೊಟ್ಟ ಲೇಖಕರಲ್ಲಿ ಪ್ರೊಫೆಸರ್ ವಸಂತ ಕುಷ್ಟಗಿ ಅವರೂ ಒಬ್ಬರು. ಕಲ್ಬುರ್ಗಿ ಮೂಲದ ವಸಂತ ಕುಷ್ಟಗಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಎಂ. ಎ. ಪದವಿ ಪಡೆದ ನಂತರ ಬೀದರ್ ನ ಭೂಮಿ ರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.

ಆನಂತರ ವಿವಿಧ ಕಾಲೇಜುಗಳಲ್ಲಿ ಅನೇಕ ಹಂತದ ಹುದ್ದೆಗಳನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ರಮನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕ ರಾಗಿಯೂ ಸೇವೆ ಸಲ್ಲಿಸಿದ್ದರು.

ಅವರ  ಭಕ್ತಿ ಗೋಪುರ, ಹೊಸ ಹೆಜ್ಜೆ, ಗಾಂಧಾರಿಯ ಕರುಣೆ, ಬೆತ್ತಲೆಯ ಬಾನು, ಚಂದ್ರಲಾ, ಮಾನ್ಯಖೇಟ ಮತ್ತು ಇತ್ತೀಚೆಗಿನ  ಅಪ್ ಅಂಡ್ ಡೌನ್ ಋತುಚಕ್ರ  ಮುಂತಾದ ಕೃತಿಗಳು ಬಹು ಜನಪ್ರಿಯವಾಗಿವೆ.

ಸನ್ಮಾನ, ಪ್ರಶಸ್ತಿ: ಪ್ರತಿಷ್ಠಿತ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ,ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಸರ್ ಎಂ ವಿ ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿ ಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಪ್ರೊ. ಕುಷ್ಟಗಿ ಅವರು ಉತ್ತಮ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳ ಜ್ಞಾನ ದಾಹ ನೀಗಿಸಿದರು. ಸಾಹಿತ್ಯ ಕ್ಷೇತ್ರಕ್ಕೂ ಅವರ ಕೊಡುಗೆ ಗಣನೀಯ ವಾದುದು. ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ, ಇತಿಹಾಸಗಳ ಕುರಿತು ಅಪಾರ ಜ್ಞಾನ ಹೊಂದಿದ್ದವರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದವರು ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸು ವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವಸಂತ ಕುಷ್ಟಗಿ ಅವರ ನಿಧನದಿಂದ ಕನ್ನಡ ಸಾಹಿತ್ಯಲೋಕ ಒಬ್ಬ ಅತ್ಯುತ್ತಮ ಲೇಖಕನನ್ನು ಕಳೆದುಕೊಂಡಿದೆ. ಭಗವಂತ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

SCROLL FOR NEXT