ರಾಜ್ಯ

ರಾಜ್ಯದಲ್ಲಿ ಈವರೆಗೆ 1,784 ಬ್ಲ್ಯಾಕ್ ಫಂಗಸ್ ಪ್ರಕರಣ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್

Srinivas Rao BV

ಬೆಂಗಳೂರು: ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣ ಕಂಡುಬಂದಿದ್ದು, 62 ಮಂದಿ ಗುಣಮುಖರಾಗಿದ್ದಾರೆ. ಇದಕ್ಕೆ ಬೇಕಾದ ಔಷಧಿಯನ್ನೂ ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಪ್ಪು ಶಿಲೀಂಧ್ರ ಸೋಂಕಿನ ಎಲ್ಲಾ ಜಿಲ್ಲಾವಾರು ಮಾಹಿತಿ ತರಿಸಿಕೊಳ್ಳಲಾಗಿದೆ. ರಾಜ್ಯಾದ್ಯಂತ ಈವರೆಗೆ 1,784 ಪ್ರಕರಣ ಕಂಡುಬಂದಿದೆ. ಇದರಲ್ಲಿ 1,564 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಸೋಂಕಿತನಿಗೆ ಕನಿಷ್ಠ 2-3 ವಾರ ಚಿಕಿತ್ಸೆ ಬೇಕಾಗುತ್ತದೆ. ಸಂಪೂರ್ಣ ಗುಣಮುಖರಾಗಲು 5-6 ವಾರಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ. ಈಗಾಗಲೇ 62 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆದರೆ ದುರದೃಷ್ಟ 111 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದರು.

ಕಪ್ಪು ಶಿಲೀಂಧ್ರ ಸೋಂಕಿಗೆ ಅಂಪೊಟೆರಿಸಿನ್ ಬಿ ಔಷಧಿ ವೈಲ್ ಬೇಕಾಗುತ್ತದೆ. ಕೇಂದ್ರ ಸರ್ಕಾರವು 9,750 ವೈಲ್ ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಇದರಲ್ಲಿ 8,860 ವೈಲ್ ನಿನ್ನೆ ಬಂದಿದೆ. ಒಟ್ಟು 18,650 ವೈಲ್ ಗಳು ರಾಜ್ಯಕ್ಕೆ ದೊರೆತಿದೆ. ಸರ್ಕಾರಿ ಆಸ್ಪತ್ರೆಗಳಿಗೆ 8,860 ವೈಲ್ ಗಳನ್ನು ಬಳಸಲಾಗಿದೆ. ಖಾಸಗಿ ಆಸ್ಪತ್ರೆಗಳು ಸೇರಿ ಬೇರೆ ಕಡೆಗಳಿಗೆ 9,740 ವೈಲ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಆಯುಷ್ಮಾನ್ ಭಾರತ್ ನಡಿ ಚಿಕಿತ್ಸೆಗೆ ಚರ್ಚೆ

ಮಧ್ಯಮ ವರ್ಗದವರು, ಬಡವರ್ಗದವರು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ಎಲ್ಲರಿಗೂ ಕಪ್ಪು ಶಿಲೀಂಧ್ರಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ಹಿಂದೆಯೇ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಘೋಷಿಸಿದ್ದಾರೆ. ಒಬ್ಬರಿಗೆ 2-3 ಲಕ್ಷ ರೂ. ಖರ್ಚಾಗಲಿದ್ದು, ಸರ್ಕಾರವೇ ಭರಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಉಚಿತವಾಗಿ ನೀಡಲು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದಡಿ ಚಿಕಿತ್ಸೆ ನೀಡಬೇಕೆಂದು ಸಲಹೆ ಬಂದಿದೆ. ಈ ಕುರಿತು ಮಾತುಕತೆ ನಡೆಸಲಾಗುವುದು ಎಂದರು.

ಆಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಕೇಂದ್ರ ರೂಪಿಸಲಾಗಿದೆ. ಕೋವಿಡ್ ನಿಂದ ಗುಣಮುಖರಾದವರಿಗೆ ಬೇರೆ ಸೋಂಕಿನ ಲಕ್ಷಣ ಕಂಡುಬಂದಾಗ, ಅದಕ್ಕೆ ಬೇಕಾದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಚಿಕಿತ್ಸೆಯ ಕುರಿತು ವೈದ್ಯರಿಗೂ ತರಬೇತಿ ನೀಡಲಾಗುತ್ತಿದೆ. ಗುಣಮುಖರಾದ ಎಲ್ಲರಿಗೂ ಅಡ್ಡ ಪರಿಣಾಮ ಬರುವುದಿಲ್ಲ. ದೀರ್ಘ ಕಾಲ ಐಸಿಯುನಲ್ಲಿರುವವರು, ಹೆಚ್ಚು ಸ್ಟೀರಾಯಿಡ್ ಪಡೆದವರಲ್ಲಿ ಕೆಲವರಿಗೆ ಮಾತ್ರ ದುಷ್ಪರಿಣಾಮವಾಗುತ್ತಿದೆ. ಅದಕ್ಕೆ ಚಿಕಿತ್ಸೆ ನೀಡಲು ಬೇಕಾದ ಸಿದ್ಧತೆ ಮಾಡಲಾಗಿದೆ ಎಂದರು. ಜೂನ್ ಅಂತ್ಯಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಬಹುದು. ಆದರೆ ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಬೇಕು ಎಂದು ಸಚಿವರು ಕೋರಿದರು.

ಒಂದೂವರೆ ಕೋಟಿ ಕೋವಿಡ್ ಲಸಿಕೆ ಉಚಿತವಾಗಿಯೇ ನೀಡಿದ್ದೇವೆ. ಹೆಪಟೈಟಿಸ್ ಬಿ ಲಸಿಕೆ 1982 ರಲ್ಲಿ ಪರಿಚಯವಾದರೂ, ಭಾರತಕ್ಕೆ 2002 ರಲ್ಲಿ ಬಂತು. ಒಂದು ಲಸಿಕೆ ಬರಲು 20 ವರ್ಷ ಬೇಕಾಯಿತು. ಕೊರೊನಾ ಲಸಿಕೆ ದೇಶೀಯವಾಗಿಯೇ ತಯಾರಾಗಿದೆ. ಇದರಲ್ಲೂ ರಾಜಕಾರಣ ಮಾಡಿದರೆ ಜನರೇ ಛೀಮಾರಿ ಹಾಕುತ್ತಾರೆ ಎಂದರು.

SCROLL FOR NEXT