ರಾಜ್ಯ

ಶಿಲ್ಪಾನಾಗ್ v/s ರೋಹಿಣಿ ಸಿಂಧೂರಿ: ಮೈಸೂರಿಗೆ ಮುಖ್ಯಕಾರ್ಯದರ್ಶಿ ರವಿಕುಮಾರ್ ಭೇಟಿ; ಇಬ್ಬರು ಅಧಿಕಾರಿಗಳ ಜೊತೆ ಪ್ರತ್ಯೇಕ ಮಾತುಕತೆ

Shilpa D

ಮೈಸೂರು: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರನ್ನು ಪ್ರತ್ಯೇಕವಾಗಿ ಕರೆದು ಮಾಹಿತಿ ಪಡೆದಿದ್ದಾರೆ.

ಕೋವಿಡ್‌ ಸಂಬಂಧ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸಭೆ ನಡೆಸಿದ ಬಳಿಕ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌ ಅವರ ಜೊತೆ ಮಾತನಾಡಿದ್ದಾರೆ. ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ಕೋವಿಡ್‌ ನಿರ್ವಹಣೆ ಸಂಬಂಧ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಕರೆದಿದ್ದ ಸಭೆಗೆ ಅರ್ಧ ಗಂಟೆ ತಡವಾಗಿ ಆಗಮಿಸಿದ ಶಿಲ್ಪಾ ನಾಗ್‌, ಸಭೆಯ ಬಳಿಕ ಪಾಲಿಕೆ ಆಯುಕ್ತರ ಕಾರು ಬಿಟ್ಟು, ಬೇರೊಂದು ಕಾರಿನಲ್ಲಿ ತೆರಳಿದ್ದಾರೆ. ಆದರೆ ಇಬ್ಬರಿಂದ ಮಾಹಿತಿ ಪಡೆದ ಮುಖ್ಯ ಕಾರ್ಯದರ್ಶಿಗಗಳು ಯಾವುದೇ ನಿರ್ಧಾರ ತಿಳಿಸಿಲ್ಲ.

ರವಿಕುಮಾರ್ ಅವರ ಭೇಟಿ ಸಂದರ್ಭದಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ತಮ್ಮ ರಾಜಿನಾಮೆ ಪತ್ರ ನೀಡಿದ್ದಾರೆ. ಆದರೆ ಮುಖ್ಯ ಕಾರ್ಯದರ್ಶಿಗಳು ಅದನ್ನು ಪಡೆಯದೇ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ನಂತರ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರಾದ ಡಾ.ಜಿ. ಸಿ. ಪ್ರಕಾಶ್‌, ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಸ್ಪಿ ಸಿ.ಬಿ.ರಿಷ್ಯಂತ್‌, ಜಿಪಂ ಸಿಇಒ ಎ.ಎಂ. ಯೋಗೀಶ್‌, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌, ಅಪರ ಜಿಲ್ಲಾಧಿಕಾರಿ ಡಾ.
ಬಿ.ಎಸ್‌.ಮಂಜುನಾಥಸ್ವಾಮಿ, ಮುಡಾ ಆಯುಕ್ತ ಡಿ.ಬಿ.ನಟೇಶ್‌, ಉಪ ವಿಭಾಗಾಧಿಕಾರಿ ಡಾ.ಎನ್‌.ಸಿ.ವೆಂಕಟರಾಜು, ಎಂ.ಎಂ.ಸಿ. ಆರ್‌.ಐ. ನಿರ್ದೇಶಕ ಹಾಗೂ ಡೀನ್‌ ಡಾ. ನಂಜರಾಜ ಮುಂತಾದವರು ಭಾಗಿಯಾಗಿದ್ದರು.

ಪಾಲಿಕೆ ಆಯುಕ್ತರ ರಾಜೀನಾಮೆ ಪತ್ರವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಮಾಧ್ಯಮಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸದೆ ಸಭೆಗೆ ತೆರಳಿದರು. ಸಭೆ ಮುಗಿಯುವವರೆಗೆ 2 ಗಂಟೆ ಪತ್ರಕರ್ತರು ಕಾದು ಕುಳಿತರು, ಆದರೆ ಮತ್ತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ನೇರವಾಗಿ ತಮ್ಮ ಕಾರಿನಲ್ಲಿ ಕುಳಿತು ಕೋವಿಡ್ ನಿರ್ವಹಣೆ ಪರಿಶೀಲಿಸಲು ತೆರಳಿದರು.

ಸಿಆರ್ ಎಸ್ ಫಂಡ್ ಬಗ್ಗೆ ಶಿಲ್ಪಾ ನಾಗ್ ವರದಿ ನೀಡಿಲ್ಲ ಎಂದು ರೋಹಿಣಿ ಸಿಂಧೂರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು, ಆದರೆ ಮೈಸೂರು ಮಹಾನರ ಪಾಲಿಕೆ ತಾವು ಮಾಡಿರುವ ಕೆಲಸದ ಬಗ್ಗೆ ಸುಮಾರು 127 ಪುಟಗಳ ವರದಿಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ, ಪಾಲಿಕೆ ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಸಮಗ್ರ ವರದಿ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಚಿಸಲಾದ ವಿವಿಧ ತಂಡಗಳ ವಿವರಗಳನ್ನು ಸಹ ಸಲ್ಲಿಸಲಾಯಿತು.

ಈ ಸಂಬಂಧ ಆಯುಕ್ತೆ ಶಿಲ್ಪಾ ನಾಗ್ ಅಧಿಕೃತ ಹೇಳಿಕೆ ನೀಡಿದ್ದು, ಡಿಸಿ ರೋಹಿಣಿ ಸಿಂಧೂರಿ ಅವರು ತಮ್ಮ ವಿರುದ್ಧ ಆಧಾರರಹಿತ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಸಿಎಸ್ಆರ್ ವರದಿಯನ್ನು ನನ್ನಿಂದ ಒದಗಿಸಲಾಗಿಲ್ಲ ಎಂದು ಡಿಸಿ ಮಾಡಿದ ಆರೋಪವು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಡಿಸಿ ಸ್ವತಃ ಮೇ 7 ರಂದು ಎಂಸಿಸಿ ಆಯುಕ್ತರನ್ನು ಸಿಎಸ್ಆರ್ ನಿಧಿಗಳಿಗಾಗಿ ಜಿಲ್ಲಾ ನೋಡಲ್ ಅಧಿಕಾರಿಯಾಗಿ ನೇಮಿಸಿದ್ದರು. ನೋಡಲ್ ಅಧಿಕಾರಿ ಮುಖ್ಯ ಸ್ಥಾನದಿಂದ ತೆಗೆದು ಹಾಕಿ ಜೂನ್ 1 ರಂದು ಮತ್ತೊಂದು ಆದೇಶ ಹೊರಡಿಸಿದ್ದಾರೆ ಎಂದು ಶಿಲ್ಪಾ ನಾಗ್ ತಿಳಿಸಿದ್ದಾರೆ.

SCROLL FOR NEXT