ರಾಜ್ಯ

ಅಧಿಕಾರಿಗಳ ಜಗಳ ಬಗ್ಗೆ ಮುಖ್ಯಮಂತ್ರಿ ತೀರ್ಮಾನಿಸುತ್ತಾರೆ, ಜಿಲ್ಲಾ ಉಸ್ತುವಾರಿ ಸ್ಥಾನ ತ್ಯಜಿಸಲು ಸಿದ್ದ: ಎಸ್.ಟಿ. ಸೋಮಶೇಖರ್

Sumana Upadhyaya

ಮೈಸೂರು: ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿನ್ನೆ ಮೈಸೂರಿಗೆ ಬಂದು ಮಹಿಳಾ ಐಎಎಸ್ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಸರ್ಕಾರಕ್ಕೆ ವಿವರ ನೀಡಿದ್ದಾರೆ, ಅದರ ಪ್ರಕಾರ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡು ಈ ವಿವಾದಕ್ಕೆ ಇತ್ಯರ್ಥ ಹಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಅವರು ಇಂದು ಬೆಳಗ್ಗೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮೈಸೂರಿನ ಅಧಿಕಾರಿಗಳ ಜಗಳ ಧಾರವಾಹಿ ಕಥೆಯಂತೆ ಮುಂದುವರಿಯುತ್ತಲೇ ಇರಲು ಸಾಧ್ಯವಿಲ್ಲ, ಇದಕ್ಕೆ ಫುಲ್ ಸ್ಟಾಪ್ ಹಾಕಲೇಬೇಕು, ಆ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ, ಮುಖ್ಯ ಕಾರ್ಯದರ್ಶಿಗಳು ನೀಡಿದ ವರದಿ ಮತ್ತು ಗುಪ್ತಚರ ಇಲಾಖೆ ಹೀಗೆ ನಾನಾ ಮೂಲಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿಗಳು ಒಂದೆರಡು ದಿನದಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತಾರೆ, ಇಂದು ಸಂಜೆ ನಾನು ಕೂಡ ಬೆಂಗಳೂರಿಗೆ ಹೋಗಿ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡುತ್ತೇನೆ ಎಂದರು.

ಅಧಿಕಾರಿಗಳ ಭಿನ್ನಾಭಿಪ್ರಾಯ ಹಾಗೂ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಬಗ್ಗೆ ನನಗೆ ಈಗ ಮಾಹಿತಿಯಿಲ್ಲ, ನನ್ನದೇನಿದ್ದರೂ ಮೈಸೂರಿನಲ್ಲಿ ಸದ್ಯಕ್ಕೆ ಕೊರೋನಾ ಮತ್ತು ಬ್ಲ್ಯಾಕ್ ಫಂಗಸ್ ನಿಯಂತ್ರಿಸುವ ಕೆಲಸವಷ್ಟೇ, ನಾನು ಮುಖ್ಯಮಂತ್ರಿಗಳಿಗೆ ಈ ವಿಷಯದಲ್ಲಿ ಏನೂ ಮನವಿ ಮಾಡಿಕೊಂಡಿಲ್ಲ ಎಂದರು.

ರಾಜೀನಾಮೆಗೆ ಸಿದ್ದ: ಮೈಸೂರಿನಲ್ಲಿ ಕೊರೋನಾ ನಿಯಂತ್ರಿಸಲು ವಿಫಲನಾಗಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರೆ, ಮೈಸೂರಿನ ಜನತೆಗೆ ಒಳ್ಳೆಯದಾಗುವುದಾದರೆ ನನ್ನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೂಡ ಸಿದ್ದನಿದ್ದೇನೆ, ಇದರಿಂದ ಕಾಂಗ್ರೆಸ್ ನಾಯಕರಿಗೆ ಖುಷಿಯಾಗುವುದಾದರೆ ಆಗಲಿ ಎಂದರು.

ವೈಯಕ್ತಿಕವಾಗಿ ನೋವಾಗಿದೆ: ಮೈಸೂರು ಜಿಲ್ಲೆಗೆ ಉಸ್ತುವಾರಿ ಸಚಿವನಾಗಿ ಬಂದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಜಿಲ್ಲೆಯ ಜನತೆಗೆ ಉತ್ತಮ ಕೆಲಸ ಮಾಡಬೇಕೆಂಬ ಮನಸ್ಸಿನಿಂದ ಹುದ್ದೆ ವಹಿಸಿಕೊಂಡೆ. ಪಕ್ಷ ಭೇದ ಮರೆತು ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದು ನನ್ನ ಕಾರ್ಯವೈಖರಿ, ಆದರೆ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ನಡೆದ ಬೆಳವಣಿಗೆಗಳಿಂದ ಮನಸ್ಸಿಗೆ ತೀರಾ ನೋವಾಗಿದೆ. ನನ್ನ ನೋವನ್ನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ, ಮೈಸೂರಿನಲ್ಲಿ ಹಿಂದೆಂದೂ ಆಗದಿರುವಂತಹ ಘಟನೆಗಳು ನಡೆಯುತ್ತಿವೆ, ಹಲವು ಮೂಲಗಳಿಂದ ನನಗೆ ಮಾಹಿತಿ ಸಿಕ್ಕಿದೆ, ಇದನ್ನು ಕೂಡಲೇ ಸರಿಪಡಿಸಿ ಮೈಸೂರನ್ನು ಕೊರೋನಾ ಮುಕ್ತಗೊಳಿಸಿ ಎಂದು ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದೇನೆ ಎಂದರು.

ಎಲ್ಲವೂ ನನ್ನಿಂದಲೆ ಎಂಬ ಭ್ರಮೆ ಬೇಡ: ಜಿಲ್ಲೆಯಲ್ಲಿ ಒಬ್ಬರೇ ಕೋವಿಡ್ ನಿಯಂತ್ರಿಸಿದ್ದೇವೆ ಎಂಬ ಭ್ರಮೆ ಬೇಡ, 11 ಕ್ಷೇತ್ರದ ಶಾಸಕರು, ಮೂರು ಲೋಕಸಭಾ ಸದಸ್ಯರು, ಸಾರ್ವಜನಿಕರು, ಸಂಘ ಸಂಸ್ಥೆಗಳು, ವೈದ್ಯರು-ದಾದಿಯರು, ಆಶಾ ಕಾರ್ಯಕರ್ತೆಯರು, ಫ್ರಂಟ್ ಲೈನ್ ವರ್ಕರ್ಸ್ ಎಲ್ಲರೂ ಕೂಡ ಕೊರೋನಾ ನಿಯಂತ್ರಣಕ್ಕೆ  ಸಾಕಷ್ಟು ಶ್ರಮಿಸಿದ್ದಾರೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಇದು ಒಬ್ಬರಿಂದ ಆಗುವ ಕೆಲಸವಲ್ಲ ಎಂದು ಸಚಿವ ಸೋಮಶೇಖರ್ ಹೇಳಿದರು.

SCROLL FOR NEXT