ರಾಜ್ಯ

ಬೆಳಗಾವಿ: ಬಿಮ್ಸ್ ನ ನೂತನ ಆಡಳಿತಾಧಿಕಾರಿಯಾಗಿ ಅಮ್ಲನ್ ಬಿಸ್ವಾಸ್ ನೇಮಕ 

Sumana Upadhyaya

ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್)ಯ ನೂತನ ಆಡಳಿತಾಧಿಕಾರಿಯನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಆದಿತ್ಯ ಅಮ್ಲನ್ ಬಿಸ್ವಾಸ್ ಅವರನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇಮಿಸಿದ್ದಾರೆ.

ನಿನ್ನೆ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಸುವರ್ಣ ವಿಧಾನ ಸೌಧದಲ್ಲಿ ಕೋವಿಡ್ ನಿಯಂತ್ರಣ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಸಂಸ್ಥೆಯಲ್ಲಿ ಕಂಡುಬಂದಿರುವ ಹಲವು ಕುಂದುಕೊರತೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲನ್ ಬಿಸ್ವಾಸ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ತಕ್ಷಣವೇ ಅವರು ಅಧಿಕಾರ ಸ್ವೀಕರಿಸಿ ಅಲ್ಲಿನ ವ್ಯವಸ್ಥೆ ಸರಿಪಡಿಸಲಿದ್ದಾರೆ ಎಂದರು.

ಕಬ್ಬು ಬೆಳೆಗಾರರ ಪ್ರತಿಭಟನೆ: ನಿನ್ನೆ ಬೆಳಗಾವಿಗೆ ಆಗಮಿಸಿದ್ದ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ರೈತರ ಪ್ರತಿಭಟನೆ ಬಿಸಿ ಎದುರಾಯಿತು. ನಿನ್ನೆ ಬೆಳಗ್ಗೆ ಸುವರ್ಣ ವಿಧಾನಸೌಧದ ಎದುರು ರೈತರು ಕಬ್ಬಿನ ಬಿಲ್ ಬಾಕಿ ಪಾವತಿಸಲು ಸಿಎಂ ಕ್ರಮ ಕೈಗೊಳ್ಳಬೇಕು. ತರಕಾರಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿ ರೈತ ಮುಖಂಡ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ ನೇತೃತ್ವದಲ್ಲಿ ಪ್ರತಿಭಟನೆಯನ್ನು ರೈತರು ನಡೆಸಿದರು.

SCROLL FOR NEXT