ರಾಜ್ಯ

ಇದೇ ಮೊದಲು: ಶೈತ್ಯೀಕರಿಸಿದ ಕಂಟೇನರ್ ಗಳಿರುವ ರೈಲಿನಲ್ಲಿ ವಿದೇಶದಿಂದ 1000 ಟನ್ ತಾಜಾ ಹಣ್ಣು ಬೆಂಗಳೂರಿಗೆ ಆಗಮನ

Srinivas Rao BV

ಬೆಂಗಳೂರು: ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ವಿದೇಶದಿಂದ 1000 ಟನ್ ತಾಜಾ ಹಣ್ಣುಗಳನ್ನು ಶೈತ್ಯೀಕರಿಸಿದ ಕಂಟೇನರ್ ಗಳ ಮೂಲಕ ಬೆಂಗಳೂರಿಗೆ ತಲುಪಿಸಿದೆ. 

1012 ಟನ್ ಗಳಷ್ಟು ತಾಜಾ ಹಣ್ಣುಗಳಾದ ಆಪಲ್, ಕಿವಿ ಹಣ್ಣು, ಏಪ್ರಿಕಾಟ್ಸ್ ಹಾಗೂ ಚೆರ್ರಿಗಳನ್ನು ಬ್ರೆಜಿಲ್, ಇರಾನ್, ಯೂರೋಪ್ ಗಳಿಂದ ಮುಂಬೈ ನಿಂದ ವೈಟ್ ಫೀಲ್ಡ್ ನಲ್ಲಿರುವ ಇನ್ಲ್ಯಾಂಡ್ ಕಂಟೇನರ್ ಡಿಪೋಗೆ ತಲುಪಿಸಲಾಗಿದೆ. 

ರೈಲ್ವೆ ಅಡಿಯಲ್ಲಿರುವ ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಒಎನ್ ಸಿಒಆರ್)  ನಿಂದ ನಿರ್ವಹಿಸಲಾಗುವ ರೀಫರ್ ಸ್ಪೆಷಲ್ ನಲ್ಲಿ 44 ಶೈತ್ಯೀಕರಿಸಿದ ಕಂಟೇನರ್ ಗಳಲ್ಲಿ ತಲಾ 23 ಟನ್ ಗಳ ಹಣ್ಣುಗಳನ್ನು ತುಂಬಿಸಲಾಗಿತ್ತು. ಇವುಗಳನ್ನು ಮುಂಬೈ ನ ನೆಹರು ಪೋರ್ಟ್ ಟ್ರಸ್ಟ್ ನ ಒಳಭಾಗದಲ್ಲಿರುವ ರೈಲ್ ಯಾರ್ಡ್ ನಿಂದ ಸಾಗಿಸಲಾಗಿತ್ತು.

ವಿಶೇಷ ರೈಲು ಮಂಗಳವಾರ (ಜೂ.08) ರಂದು ಮಧ್ಯಾಹ್ನ 12 ಕ್ಕೆ ಹೊರಟು ಗುರುವಾರ (ಜೂ.10) ರಂದು ವೈಟ್ ಫೀಲ್ಡ್ ಗೆ ಬೆಳಿಗ್ಗೆ 10.40ಕ್ಕೆ ತಲುಪಿದೆ. ಸಿಒಎನ್ ಸಿಒಆರ್ ನ ಸಮೂಹದ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ್ ಸಾಧು ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, 

ದೇಶದಲ್ಲಿ ರೀಫರ್ ಟ್ರೈನ್ ನ್ನು ಬಳಕೆ ಮಾಡಿ ತಾಜಾ ಹಣ್ಣುಗಳನ್ನು ಇದೇ ಮೊದಲ ಬಾರಿಗೆ ಸಾಗಣೆ ಮಾಡಲಾಗಿದೆ. ಪ್ರಾಯೋಗಿಕವಾಗಿ ನಡೆಸಿರಲಾಗಿರುವ ಈ ಯತ್ನ ಯಶಸ್ವಿಯಾಗಿದೆ.  ದಕ್ಷಿಣ ಭಾರತದಲ್ಲಿ ವಿದೇಶದಿಂದ ಆಮದು ಮಾಡಿಕೊಂಡ ಹಣ್ಣುಗಳಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಇದೆ ಹೀಗಾಗಿ ಈ ಬೇಡಿಕೆಯನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದೆವು ಎಂದು ಅನೂಪ್ ದಯಾನಂದ್ ಸಾಧು ಹೇಳಿದ್ದಾರೆ. 

ಮುಂಚೂಣಿಯಲ್ಲಿರುವ ಹಣ್ಣು ಆಮದು ಸಂಸ್ಥೆ ಐಜಿ ಫ್ರೆಷ್ ಇಂಟರ್ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಸರಕುಗಳನ್ನು ಕಾಯ್ದಿರಿಸಲಾಗಿತ್ತು. ಈ ಹಿಂದೆ ರಸ್ತೆ ಮಾರ್ಗವಾಗಿ ತಾಜಾ ಹಣ್ಣುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ರೈಲಿನ ಮೂಲಕ ಸಾಗಣೆ ಮಾಡಿದ್ದು ರೈಲ್ವೆ ಇಲಾಖೆಯ ಅಂಗ ಸಂಸ್ಥೆಯಾಗಿರುವ ಸಿಒಎನ್ ಸಿಒಆರ್ ಗೆ 25,21,000 ರೂಪಾಯಿ ಆದಾಯ ಬಂದಿದೆ. ಪ್ರತಿ ವಾರವೂ ಇಂತಹ ರೀಫರ್ ಸ್ಪೆಷಲ್ ನ ಮೂಲಕ ಸಾಗಣೆ ಮಾಡಲಿದ್ದೇವೆ ಎಂದು ಗ್ರೂಪ್ ಜನರಲ್ ಮ್ಯಾನೇಜರ್ ಹೇಳಿದ್ದಾರೆ. 

ಆಮದು ಮಾಡಿಕೊಳ್ಳಲಾಗಿರುವ ಹಣ್ಣುಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳಗಳಿಗೆ ತಲುಪಲಿದ್ದು ಬೆಂಗಳೂರು ಕೇಂದ್ರವಾಗಿರಲಿದೆ. 

SCROLL FOR NEXT