ರಾಜ್ಯ

ಸಿಎಂ ಪುತ್ರ ವಿಜಯೇಂದ್ರರಿಂದ ಲಾಕ್ ಡೌನ್ ನಿಯಮ ಉಲ್ಲಂಘನೆ: ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ

Sumana Upadhyaya

ಬೆಂಗಳೂರು: ಸರ್ಕಾರದ ಕೋವಿಡ್ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದಾಗ ಅದನ್ನು ಗಾಳಿಗೆ ತೂರಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಅವರು ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಆರೋಪವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಇಂದು ಆದೇಶ ನೀಡಿದೆ.

ಏಪ್ರಿಲ್ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರಂಭದಲ್ಲಿ ಜನತಾ ಕರ್ಫ್ಯೂ ಘೋಷಿಸಿ ನಂತರ ಲಾಕ್ ಡೌನ್ ವಿಧಿಸಿತು. ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಬೇರೆಲ್ಲದಕ್ಕೂ ಸರ್ಕಾರ ನಿರ್ಬಂಧ ವಿಧಿಸಿತು. ದೇವಾಲಯ ದರ್ಶನಕ್ಕೂ ಅವಕಾಶವಿಲ್ಲ.

ಈ ಕೊರೋನಾ ಲಾಕ್ ಡೌನ್ ನಿಯಮ ಮಧ್ಯೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಕಳೆದ ತಿಂಗಳು ತಮ್ಮ ಪತ್ನಿ ಜೊತೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕಾರಿನಲ್ಲಿ ಹೋಗಿ ದರ್ಶನ ಪಡೆದಿದ್ದಲ್ಲದೆ ಪೂಜೆ ನೆರವೇರಿಸಿದ್ದರು, ಕಪಿಲಾ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದು, ಇದು ಎಷ್ಟು ಸರಿ, ಜನಸಾಮಾನ್ಯರಿಗೊಂದು ನಿಯಮ, ಜನಪ್ರತಿನಿಧಿಗಳಿಗೊಂದು ನಿಯಮವೇ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ಇಂದು ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

SCROLL FOR NEXT