ರಾಜ್ಯ

ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ಧಲಿಂಗಯ್ಯ ಸ್ಮರಣಾರ್ಥ ಅಧ್ಯಯನ ಕೇಂದ್ರಕ್ಕೆ ಸರ್ಕಾರ ಒಲವು: ಸಚಿವ ಆರ್.ಅಶೋಕ್

Sumana Upadhyaya

ಬೆಂಗಳೂರು: ಅಗಲಿರುವ ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ಧಲಿಂಗಯ್ಯ ಅವರ ನೆನಪಿಗಾಗಿ ಸರ್ಕಾರ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಜೊತೆಗೆ ಡಾ.ಸಿದ್ಧಲಿಂಗಯ್ಯನವರ ಅಂತಿಮ ದರ್ಶನ ಪಡೆದ ಅವರು ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿ, ಸಾಹಿತ್ಯದ ಮೂಲಕ ದೀನದಲಿತರ ದನಿಯಾಗಿ ಸಿದ್ದಲಿಂಗಯ್ಯನವರು ನಿಂತಿದ್ದರು. ವಿಧಾನ ಪರಿಷತ್ ಸದಸ್ಯರಾಗಿ ಸದನದಲ್ಲಿಯೂ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದರು. ಅವರ ಅಗಲಿಕೆ ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದಿದ್ದಾರೆ.

ಸಿದ್ದಲಿಂಗಯ್ಯನವರು ನನಗೆ ಬಹಳ ಆತ್ಮೀಯ ಸ್ನೇಹಿತರು, ಸಿದ್ದಲಿಂಗಯ್ಯನವರು ಅಜಾತಶತ್ರು. ಅವರನ್ನು ದ್ವೇಷಿಸುವವರು ಬಹಳ ಯಾರೂ ಇಲ್ಲ ಎನ್ನಬಹುದು. ಎಲ್ಲರನ್ನೂ ಪ್ರೀತಿ ಮಾಡುತ್ತಿದ್ದ ಸಾಹಿತಿ. ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಅಗಲಿಕೆ ನೋವು ತಂದಿದೆ ಎಂದರು.

ಸಿದ್ದಲಿಂಗಯ್ಯನವರ ಚಿಂತನೆ, ನೆನಪು ಸದಾ ಜನಮಾನಸದಲ್ಲಿ ಉಳಿಯಲು, ಮುಂದಿನ ಜನಾಂಗಕ್ಕೆ ಅವರ ಅಧ್ಯಯನ, ಸಾಹಿತ್ಯ ಕೃಷಿ ಸಿಗಲು ಒಂದು ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದ್ದು ಈ ಬಗ್ಗೆ ಅವರ ಕುಟುಂಬಸ್ಥರ ಜೊತೆ ಪ್ರಸ್ತಾಪಿಸಿದ್ದೇನೆ, ಈ ಕಾರ್ಯವೆಲ್ಲಾ ಮುಗಿದ ಮೇಲೆ ಕುಟುಂಬಸ್ಥರ ಜೊತೆ ಕುಳಿತು ಎಲ್ಲಿ, ಎಷ್ಟು ಸ್ಥಳದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸುವುದು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಅಶೋಕ್ ತಿಳಿಸಿದರು.

SCROLL FOR NEXT