ರಾಜ್ಯ

ಬೀದರ್‌ನಲ್ಲಿ ಅಪರೂಪದ ನೀಲ್‍ಗಾಯ್ ಪ್ರತ್ಯಕ್ಷ!

Manjula VN

ಬೀದರ್: ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಪರೂಪದ ಪ್ರಾಣಿ ಬೀದರ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಬೀದರ್ ನಲ್ಲಿ ಅಪರೂಪದ ನೀಲ್‍ಗಾಯ್(ನೀಲಿ ಜಿಂಕೆ) ಪ್ರತ್ಯಕ್ಷವಾಗಿದೆ.

ಈ ಅಪರೂಪದ ಪ್ರಾಣಿ ಪ್ರತ್ಯಕ್ಷದಿಂದಾಗಿ ಜಿಲ್ಲೆಯ ಜನರು ಅಚ್ಚರಿಪಟ್ಟಿದ್ದಾರೆ. ನೀಲ್‍ಗಾಯ್ ಪ್ರಾಣಿ ಮಹಾರಾಷ್ಟ್ರ, ಬಿಹಾರ ಸೇರಿದಂತೆ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಂದಿ ಬಿಜ್ಜಲಗಾಂವ್ ಗ್ರಾಮದ ಬಳಿ ಅಪರೂಪದ ನೀಲ್‍ಗಾಯ್ ಕಾಣಿಸಿಕೊಂಡಿದೆ.

ಬೀದರ್ ಹಾಗೂ ಕಲಬುರಗಿಯಲ್ಲಿ ಅರಣ್ಯದ ಅಧಿಕಾರಿಗಳಿಗೆ ಸಾಮಾನ್ಯವಾಗಿ 1-2 ನೀಲ್‍ಗಾಯ್ ಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈ ಬಾರಿ ಒಟ್ಟಿರೆ 15-20 ನೀಲ್‍ಗಾಯ್ ಗಳು ಕಾಣಿಸಿಕೊಂಡಿರುವುದು ಅಧಿಕಾರಿಗಳಿಗೂ ಆಶ್ಚರ್ಯವನ್ನುಂಟು ಮಾಡಿದೆ. 

ಕಲಬುರಗಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವೆಂಕಟೇಶನ್ ಅವರು ಮಾತನಾಡಿ, ನೀಲ್‍ಗಾಯ್ ಗಳು ಈ ಪ್ರದೇಶದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿವೆ. ಇದೀಗ ಅವುಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಹೇಳಿದ್ದಾರೆ. 

ಮಹಾರಾಷ್ಟ್ರದ ಲಾತೂರ್ ಮತ್ತು ನಾಂದೇಡ್ ಜಿಲ್ಲೆಗಳ ಪಕ್ಕದಲ್ಲಿರುವ ನಂದಿ ಬಿಡಿಲಿಗಾಂವ್ ಗ್ರಾಮದಲ್ಲಿ ಇವುಗಳ ಹಿಂಡು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಮೇವಿಗಾಗಿ ಇವುಗಳ ಹಿಂಡು ಅಲ್ಲಿಯೇ ಬೀಡು ಬಿಡುವ ಸಾಧ್ಯತೆಗಳಿದ್ದು, ಜನರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ಇದೀಗ ಸ್ಥಳದಲ್ಲಿಯೇ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 

ಬೀದರ್ ಅರಣ್ಯದ ಉಪ ಸಂರಕ್ಷಣಾಧಿಕಾರಿ ಎಸ್.ಶಿವಶಂಕರ್ ಅವರು ಮಾತನಾಡಿ, ಹಿಂಡಿನಲ್ಲಿದ್ದ ಕೆಲ ನೀಲ್‍ಗಾಯ್'ನ್ನು ಈ ಹಿಂದೆ ನೋಡಿದ್ದೆವು. ಆದರೆ, ಇದೀಗ ಅವುಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪಿನಲ್ಲಿ ಎರಡು ಗಂಡು, ಎರಡು ಕರು ಮತ್ತು 11 ಹೆಣ್ಣು ನೀಲ್‍ಗಾಯ್ ಇದ್ದು, ಮತ್ತೊಂದು ಒಂಬತ್ತು ಗಂಡು, ಮೂರು ಕರು ಮತ್ತು 10 ಹೆಣ್ಣು ಸೇರಿ ಒಟ್ಟು 22 ನೀಲ್‍ಗಾಯ್'ಗಳಿವೆ. 

ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯ್ ಕುಮಾರ್ ಗೋಗಿ ಅವರು ಮಾತನಾಡಿ, ಬೀದರ್'ನ ಜಿಂಕೆಹೋಲಿ ಪ್ರದೇಶದಲ್ಲಿಯೂ ಈ ಪ್ರಾಣಿಗಳು ಕಂಡು ಬಂದಿದ್ದವು. ನೀಲ್‍ಗಾಯ್ ಕಂಡು ಬಂದಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ. 

SCROLL FOR NEXT