ರಾಜ್ಯ

ಬಿ.ಎಸ್ಸಿ ಪ್ರವೇಶಕ್ಕೆ ಸಿಇಟಿ ಇಲ್ಲ: ರಾಜ್ಯ ಸರ್ಕಾರ

Manjula VN

ಬೆಂಗಳೂರು: ಬಿ.ಎಸ್ಸಿಗೆ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮೂಲಕ ಪ್ರವೇಶ ನೀಡುವ ಚಿಂತನೆಯನ್ನು ಸರ್ಕಾರ ಕೈಬಿಟ್ಟಿರುವ ರಾಜ್ಯ ಸರ್ಕಾರ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಶಿಫಾರಸಿನಂತೆ ಈ ಶೈಕ್ಷಣಿಕ ವರ್ಷದಿಂದಲೇ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ವರ್ಷದ ಪದವಿ ಕೋರ್ಸುಗಳನ್ನು ಆರಂಭಿಸುವಂತೆ ಕುಲಪತಿಗಳಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 

2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಯ ಬಗ್ಗೆ ರಾಜ್ಯದ ಎಲ್ಲಾ ಕುಲಪತಿಗಳ ಜತೆ ನಿನ್ನೆಯಷ್ಟೇ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ವರ್ಚುಯಲ್‌ ಸಭೆ ನಡೆಸಿ ಮಾತನಾಡಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿ.ಎಸ್ಸಿಗೆ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮೂಲಕ ಪ್ರವೇಶ ನೀಡುವ ಚಿಂತನೆಯನ್ನು ಸರ್ಕಾರ ಕೈಬಿಟ್ಟಿದೆ. ವಿಜ್ಞಾನ ಬೋಧನೆ ಮತ್ತು ಕಲಿಕೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪದವಿ ವಿಜ್ಞಾನ ಪ್ರವೇಶಕ್ಕೂ ಸಿಇಟಿ ತರುವ ಯೋಚನೆ ಇತ್ತು. ಆದರೆ, ಸದ್ಯಕ್ಕೆ ಕೈಬಿಡಲಾಗಿದೆ ಎಂದು ಹೇಳಿದ್ದಾರೆ. 

‘ಅಕ್ಟೋಬರ್‌ ಮೊದಲ ವಾರದಲ್ಲಿ ಈ ವರ್ಷದ ಶೈಕ್ಷಣಿಕ ವರ್ಷದ ಚಟುವಟಿಕೆ ಆರಂಭವಾಗುತ್ತವೆ. ಮೊದಲ ವರ್ಷದಪದವಿಗೆ ಅಕ್ಟೋಬರ್‌ ಮೊದಲ ವಾರದಿಂದಲೇ ದಾಖಲಾತಿ ಆರಂಭ ಮಾಡುವಂತೆ ಕುಲಪತಿಗಳಿಗೆ ತಿಳಿಸಲಾಗಿದೆ. ಕೋವಿಡ್ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ ಪಿಯುಸಿ ವಿದ್ಯಾರ್ಥಿಗಳೆಲ್ಲರೂ ಪಾಸಾಗಿದ್ದು, ವಿವಿಧ ಕೋರ್ಸ್ ಗಳಿಗೆ ಬಹಳ ಬೇಡಿಕೆಗಳು ಬರುತ್ತಿದೆ. ಹಾಗಾಗಿ ನಾಲ್ಕು ವರ್ಷದ ಪದವಿ ತರಗತಿಗಳನ್ನು ಆರಂಭಿಸಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

ಪ್ರಸಕ್ತ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದ್ದು, ಅದಕ್ಕೆ ಸೂಕ್ತವಾದ ಕಾರ್ಯ ಚೌಕಟ್ಟು ರೂಪಿಸಲು ವಿಷಯವಾರು ಸಮಿತಿ ರಚನೆ ಮಾಡುವಂತೆಯೂ ಕುಲಪತಿಗಳಿಗೆ ಸೂಚನೆ ನೀಡಲಾಗಿದೆ. ಜು.15ರೊಳಗೆ ಈ ಸಮಿತಿಗಳು ವರದಿಗಳನ್ನು ಸಲ್ಲಿಸಬೇಕು. ಕೋವಿಡ್ ಸೋಂಕು ಎಷ್ಟು ಸಮಯ ಇರಲಿದೆಯೋ ಗೊತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆನ್'ಲೈನ್ ಮತ್ತು ಆಫ್ ಲೈನ್ ನಲ್ಲಿ ಕಲಿಯಲು ಅವಕಾಶ ಇರಲೇಬೇಕು. ಅದಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಸೌಲಭ್ಯಗಳು ವಿದ್ಯಾಸಂಸ್ಥೆಗಳಲ್ಲಿ ಇರಬೇಕು. ಡಿಜಿಟಲ್ ನಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವರ್ಚುವಲ್ ಮೂಲಕ ಬೋಧನೆ ಮಾಡಬೇಕು ಎಂದಿದ್ದಾರೆ. 

ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಈ ವರ್ಷದಿಂದಲೇ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಪ್ರತ್ಯೇಕ ಡಿಜಿಟಲ್‌ ಪೋರ್ಟಲ್‌ ಸಿದ್ಧವಾಗುತ್ತಿದೆ. ಅದನ್ನು ಇ- ಆಡಳಿತ ಇಲಾಖೆ ಅಭಿವೃದ್ಧಿಪಡಿಸುತ್ತಿದೆ. ಇದೇ 25 ರಿಂದ ಪ್ರಾಯೋಗಿಕವಾಗಿ ಬಳಸಲು ಸರ್ಕಾರ ಅನುಮತಿ ನೀಡಿದೆ. ಜುಲೈ 15ಕ್ಕೆ ಲೋಕಾರ್ಪಣೆ ಆಗಲಿದೆ. ದಾಖಲಾತಿಗೆ ನಿಗದಿ ಮಾಡಿರುವ ದಿನಾಂಕಕ್ಕೆ ಮೊದಲೇ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಪೋರ್ಟಲ್‌ ಬಳಕೆಗೆ ಸಿದ್ಧವಾಗಿರಬೇಕು ಎಂದು ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

SCROLL FOR NEXT