ರಾಜ್ಯ

ಸಂಡೂರು: ಗದ್ದೆಗಳಿಗೇ ಹೋಗಿ ರೈತರಿಗೆ ಲಸಿಕೆ ಹಾಕಿದ ಆರೋಗ್ಯ ಇಲಾಖೆ ಸಿಬ್ಬಂದಿ!

Sumana Upadhyaya

ಬಳ್ಳಾರಿ: ಹಳ್ಳಿಗಳಲ್ಲಿ ಅನೇಕರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಹೀಗಿರುವಾಗ ಗ್ರಾಮದಲ್ಲಿರುವ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಇಲ್ಲವೇ, ಹಾಕಿಸಿಕೊಳ್ಳದವರಿಗೆ ಹೇಗೆ ಹಾಕುವುದು ಎಂಬ ಬಗ್ಗೆ ಬಳ್ಳಾರಿ ಜಿಲ್ಲಾಡಳಿತ ನವೀನ ಆಲೋಚನೆ ನಡೆಸಿದೆ.

ಸಂಡೂರು ತಾಲ್ಲೂಕಿನ ಕರೆಕೊಪ್ಪ ಗ್ರಾಮದ ಪ್ರತಿಯೊಬ್ಬ ನಿವಾಸಿಗಳು ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾಡಳಿತ ಸಿಬ್ಬಂದಿ ಮಾಡಿರುವ ಉಪಾಯ ನಿಜಕ್ಕೂ ಮೆಚ್ಚುವಂಥದ್ದು. ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮನಗಂಡು ಆರೋಗ್ಯಾಧಿಕಾರಿಗಳು ರೈತರು ಕೆಲಸ ಮಾಡುತ್ತಿದ್ದ ಕೃಷಿ ಜಮೀನಿಗೇ ಹೋಗಿ ಲಸಿಕೆ ಹಾಕಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಲಸಿಕೆ ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ತಂದು ಗ್ರಾಮದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ 50 ರೈತರಿಗೆ ಲಸಿಕೆ ಹಾಕಿದ್ದಾರೆ.

ಈಗ ಬಿತ್ತನೆ ಸಮಯ, ನಮಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಲಸಿಕೆ ಹಾಕಿಸಿಕೊಳ್ಳಲು ಸಮಯವಿಲ್ಲ, ಜಮೀನಿನಲ್ಲಿ ಕೆಲಸವಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದರಂತೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈ ಹಿಂದೆ ಅತಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿದ್ದವು. ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೊರೋನಾ ಪ್ರಕರಣಗಳನ್ನು ಕಡಿಮೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಗ್ರಾಮಸ್ಥರಿಗೆ ಲಸಿಕೆ ಹಾಕುವುದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಕಷ್ಟವಾಗುತ್ತಿತ್ತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಜನಾರ್ದನ ಹೆಚ್ ಎಲ್ ಹೇಳುತ್ತಾರೆ.

ಲಸಿಕೆ ತೆಗೆದುಕೊಳ್ಳುವಂತೆ ನಿವಾಸಿಗಳಿಗೆ ಮನವರಿಕೆ ಮಾಡಿಕೊಡಲು ನಮ್ಮ ತಂಡ ಕರೇಕೋಪ್ಪ ಗ್ರಾಮಕ್ಕೆ ಭೇಟಿ ನೀಡಿದಾಗ, ಅವರಲ್ಲಿ ಹಲವರು ಹೊಲಗಳಿಗೆ ಹೋಗಿದ್ದಾರೆ ಎಂದು ಹೇಳಿದರು. ಆದ್ದರಿಂದ, ನಾವು ಹೊಲಗಳಿಗೆ ಹೋಗಿ ಲಸಿಕೆ ಹಾಕಲು ನಿರ್ಧರಿಸಿದೆವು. ಮೂವರು ವೈದ್ಯರು ಮತ್ತು ಆರು ಮಂದಿ ಆಶಾ ಕಾರ್ಯಕರ್ತರ ತಂಡ ಹೊಲಗಳಿಗೆ ಭೇಟಿ ನೀಡಿ ರೈತರಿಗೆ ಲಸಿಕೆ ಹಾಕುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರಿಗೆ ಲಸಿಕೆ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ ಕುಶಾಲ್ ರಾಜ್ ಹೇಳುತ್ತಾರೆ.

ಈ ಬಗ್ಗೆ ಮಾಹಿತಿ ನೀಡಿದ ನಿವಾಸಿ ಬಸವರಾಜ್ ಪಿ, ಮುಂಗಾರು ಆಗಮನವಾಗುತ್ತಿದ್ದಂತೆ ಈಗ ನಮಗೆ ಹೊಲಗಳಲ್ಲಿ ಬಿತ್ತನೆ ಸಮಯ, ಉತ್ತಮ ಇಳುವರಿ ಬರಬೇಕೆಂದರೆ ಈ ಸಮಯದಲ್ಲಿ ಪ್ರತಿದಿನ ಮುಖ್ಯವಾಗುತ್ತದೆ. ಲಸಿಕೆ ತೆಗೆದುಕೊಂಡ ನಂತರ ಎರಡು ಮೂರು ದಿನ ಜ್ವರ, ಮೈಕೈ ನೋವು ಎಂದು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾಗಿ ಬಂತು. ರೈತರಿಗೆ ಪ್ರತಿದಿನ ಮುಖ್ಯವಾಗುತ್ತದೆ, ಹೀಗಾಗಿ ಹಲವರು ಲಸಿಕೆ ಹಾಕಿಸಿಕೊಳ್ಳಲಿಲ್ಲ ಎಂದರು.

SCROLL FOR NEXT