ರಾಜ್ಯ

ಕೋವಿಡ್ ಮಧ್ಯೆ ಮಕ್ಕಳಲ್ಲಿ ನಿರಂತರ ಕಲಿಕೆ ಪ್ರಕ್ರಿಯೆ: ಕಾರ್ಯಪಡೆ ರಚಿಸಲು ಶಿಕ್ಷಣ ಇಲಾಖೆ ನಿರ್ಧಾರ

Sumana Upadhyaya

ಬೆಂಗಳೂರು: ಶಾಲಾ ಮಕ್ಕಳಲ್ಲಿ ನಿರಂತರ ಕಲಿಕೆಗೆ ಕಾರ್ಯಪಡೆಯನ್ನು ರಚಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಹೃದ್ರೋಗ ತಜ್ಞ, ಕೋವಿಡ್ ಮೂರನೇ ಅಲೆ ತಡೆ ಸಮಿತಿಯ ಮುಖ್ಯಸ್ಥ ಡಾ ದೇವಿ ಶೆಟ್ಟಿಯವರು ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಮಧ್ಯಂತರ ವರದಿ ಸಲ್ಲಿಸಿದ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ. ಅವರು ವರದಿಯಲ್ಲಿ ಹಂತಹಂತವಾಗಿ ಶಿಕ್ಷಣ ಸಂಸ್ಥೆಗಳನ್ನು ಮರು ಆರಂಭಿಸುವಂತೆ ಉತ್ತೇಜನ ನೀಡಿದ್ದರು.

ಕೋವಿಡ್ ಮಧ್ಯೆ ಇನ್ನೂ ಶಾಲೆಗಳು ಆರಂಭಗೊಂಡಿಲ್ಲ, ಇಂತಹ ಸನ್ನಿವೇಶದೊಳಗೆ ಮಕ್ಕಳಲ್ಲಿ ನಿರಂತರ ಕಲಿಕೆಯನ್ನು ಹೇಗೆ ಕಾರ್ಯಸಾಧುವಾಗಿಸಬಹುದು ಎಂದು ಸಲಹೆ ಪಡೆಯಲು ವಿವಿಧ ತಜ್ಞರ ಜೊತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದ್ದರು. 

ಸಭೆಯಲ್ಲಿ ಕೇಳಿಬಂದ ಸಲಹೆಗಳನ್ನು ಒಗ್ಗೂಡಿಸಿ ಶಾಲೆಗಳ ಮರು ಆರಂಭ ಕುರಿತು ಸದ್ಯದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು. ಶಾಲೆಗಳನ್ನು ಆರಂಭಿಸುವ ಮುನ್ನ ಆರೋಗ್ಯ ಇಲಾಖೆಯ ಸಲಹೆಗಳನ್ನು ಕೂಡ ಕೇಳಲಾಗುವುದು ಎಂದು ಹೇಳಿದ್ದಾರೆ.

ದೀರ್ಘಕಾಲದವರೆಗೆ ಶಾಲೆಗಳಿಂದ ಮಕ್ಕಳನ್ನು ದೂರವಿರಿಸುವುದು ಅವರ ಬೆಳವಣಿಗೆ ದೃಷ್ಟಿಯಿಂದ ಉತ್ತಮವಲ್ಲ. ನಿನ್ನೆಯ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಲವು ತೋರಿಸುತ್ತಿದ್ದಾರೆ ಎಂದು ಹೇಳಿದ್ದರು. ಇನ್ನು ಕೆಲವರು ಕಳೆದ ವರ್ಷದಂತೆ ವಿದ್ಯಾಗಮ ಮುಂದುವರಿಸುವಂತೆ ಸಲಹೆ ನೀಡಿದ್ದರು. ತಾಲ್ಲೂಕು, ಗ್ರಾಮ, ಹೋಬಳಿ ಮತ್ತು ನಗರ ಮಟ್ಟದಲ್ಲಿ ಕಲಿಕೆ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಕೂಡ ಕೆಲವರು ಸಲಹೆ ನೀಡಿದ್ದರು. ಭೌತಿಕವಾಗಿ ವಿವಿಧ ಕ್ರಮಗಳ ಮೂಲಕ ಶಿಕ್ಷಕರು-ವಿದ್ಯಾರ್ಥಿಗಳು ಸಮಾಗಮವಾಗುವ ಬಗ್ಗೆ ಕೂಡ ಸಲಹೆಗಳು ಬಂದವು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

SCROLL FOR NEXT