ಬೆಂಗಳೂರು: ಸಿಕ್ಸ್ ಪ್ಯಾಕ್ಸ್ ಆಸೆ ಹುಟ್ಟಿಸಿ ಐಟಿ ಉದ್ಯೋಗಿಗೆ 7 ಲಕ್ಷ ರು. ವಂಚಿಸಿರುವ ಘಟನೆ ನಡೆದಿದ್ದು, ಜಿಮ್ ತರಬೇತುದಾರನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
‘ಹೊಸಕೆರೆಹಳ್ಳಿ ದತ್ತಾತ್ರೇಯ ನಗರದ ನಿವಾಸಿ ಕೌಶಿಕ್ ಎಂಬುವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ‘ಎಂಪವರ್ ಫಿಟ್ನೆಸ್’ ಜಿಮ್ ಮಾಲೀಕ ಮೋಹನ್‌ಕುಮಾರ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಜಿಮ್ ನಡೆಸುತ್ತಿದ್ದ ಮೋಹನ್ ಕುಮಾರ್ ಆರ್ಥಿಕ ಸಂಕಷ್ಟದಲ್ಲಿದ್ದು ತಮ್ಮ ಸಮಸ್ಯೆಯನ್ನು ಕೌಶಿಕ್ ಬಳಿ ಹೇಳಿಕೊಂಡಿದ್ದರು, ತನಗೆ ಹಣ ಸಹಾಯ ಮಾಡಬೇಕೆಂದು, ಕೆಲವು ದಿನಗಳ ನಂತರ ಬಂದ ಲಾಭದಲ್ಲಿ ಪಾಲು ನೀಡುವುದಾಗಿ ಹೇಳಿದ್ದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮೋಹನ್ ಕುಮಾರ್ ತಿಳಿಸಿದ್ದಾರೆ.
ಪಾಲುದಾರಿಕೆ ಒಪ್ಪಂದದ ಸಂಬಂಧ ಬ್ಯಾಂಕ್ ವಹಿವಾಟಿನ ದಾಖಲಾತಿ ಸಲ್ಲಿಸುವಂತೆ ಪೊಲೀಸರು ಮೋಹನ್ ಕುಮಾರ್ ಗೆ ತಿಳಿಸಿದ್ದಾರೆ.
ಕೌಶಿಕ್ ಮೂರು ತಿಂಗಳ ಫೀಸಾಗಿ 3 ಸಾವಿರ ರು ನೀಡಿದ್ದಾರೆ, ಜೊತೆಗೆ ಹೆಚ್ಚುವರಿ ಡಯಟ್ ಪ್ಲಾನ್ ಗಾಗಿ 62 ಸಾವಿರದ ಜೊತೆಗೆ 15 ಸಾವಿರ ಹಣ ನೀಡಿದ್ದರು. ಅದಾದ ನಂತರ ಕುಮಾರ್ ಮತ್ತು ಕೌಶಿಕ್ ಸ್ನೇಹಿತರಾದರು, ತನ್ನ ಸಮಸ್ಯೆ ಹೇಳಿಕೊಂಡು ಕೌಶಿಕ್ ಬಳಿ 1 ಲಕ್ಷ ರು. ಹಣ ಪಡೆದ.
ಕುಮಾರ್ ಗೆ ಸಹಾಯ ಮಾಡಲು ಕೌಶಿಕ್ 5 ಲಕ್ಷ ರು ವಯಕ್ತಿಕ ಸಾಲ ಪಡೆದಿದ್ದರು. ಆ ಹಣವನ್ನು ಕೌಶಿಕ್ ನಿಂದ ಪಡೆದ ಕುಮಾರ್ ಕಂತುಗಳಲ್ಲಿ ಹಣ ನೀಡುವುದಾಗಿ ಮನವೊಲಿಸಿದ. ಆರಂಭದಲ್ಲಿ ಕೆಲವು ಕಂತುಗಳನ್ನು ಕುಮಾರ್ ನೀಡಿದ್ದ. ಮತ್ತೆ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದನು. ಆದರೆ ಹಣ ನೀಡಲು ಕೌಶಿಕ್ ನಿರಾಕರಿಸಿದ್ದರು.
ಕೌಶಿಕ್ ಮನೆಗೆ ಬ್ಯಾಂಕ್ ಅಧಿಕಾರಿಗಳು ತೆರಳಿ ದಾಖಲಾತಿ ಪರಿಶೀಲನೆ ನಡೆಸುವ ವೇಳೆ ಆತನ ತಂದೆ ಹಣ ಏಕೆ ಎಂದು ಪ್ರಶ್ನಿಸಿದ್ದಾರೆ, ತನ್ನ ಸ್ನೇಹಿತ ಜಿಮ್ ಟ್ರೈನರ್ ಗೆ ಸಹಾಯ ಮಾಡಲು ಸಾಲ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಇಬ್ಬರು ತೆರಳಿ ಮೋಹನ್ ಬಳಿ ಹಣ ಕೇಳಿದ್ದಾರೆ, ಆದರೆ ತನ್ನ ಬಳಿ ಹಣವಿಲ್ಲವಾಗಿ ಹೇಳಿದ ಕುಮಾರ್ ಕೆಲ ಸಮಯ ನೀಡುವಂತೆ ಹೇಳಿದ್ದಾನೆ. ಇದಾದ ನಂತರ ಕೌಶಿಕ್ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.