ರಾಜ್ಯ

ಚಾಮರಾಜನಗರ ದುರಂತದಿಂದ ಸಂಕಷ್ಟಕ್ಕೆ ಸಿಲುಕಿದ ಎಂಜಿನಿಯರ್ ಕುಟುಂಬ!

Nagaraja AB

ಮೈಸೂರು: ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ 24 ಮಂದಿಯಲ್ಲಿ 37 ವರ್ಷದ ಎಂಜಿನಿಯರ್ ಕೂಡಾ ಒಬ್ಬರಾಗಿದ್ದಾರೆ. ಇದೀಗ ಅವರನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ದಿನಗೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ  ಜಯಶಂಕರ್ ಶ್ರಮಪಟ್ಟು ಎಂಜಿನಿಯರ್ ಆಗಿದ್ದರು.

ಜಯಶಂಕರ್ ಕೊಳ್ಳೇಗಾಲ ಬಳಿಯ ಮುದಿಗುಂಡದ ನಿವಾಸಿಯಾಗಿದ್ದರು. ಅವರೇ ಕುಟುಂಬದ ಆಧಾರಸ್ತಂಭವಾಗಿದ್ದರು. ಆದರೆ, ಅವರು ನಿಧನದ ನಂತರ ಇದೀಗ ಅವರ ಕುಟುಂಬಕ್ಕೆ ಮುಂದೇನು ಎಂಬ ಚಿಂತೆ ಆವರಿಸಿದೆ. ಕಲ್ಲು ಹೊಡೆಯುವ ಕೆಲಸಗಾರರಾಗಿದ್ದ ಅವರ ತಂದೆಗೆ ಇದೀಗ ಪಾರ್ಶ್ವವಾಯು ತಗುಲಿದೆ. ಅವರ ಪತ್ನಿ ಸಿದ್ದರಾಜಮ್ಮ ಏಳು ಹಾಗೂ ಐದು ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

ತಮ್ಮ ಪತಿಗೆ ಉಸಿರಾಟದ ಸಮಸ್ಯೆ ಎದುರಾದಾಗ ಆಸ್ಪತ್ರೆ ಸಿಬ್ಬಂದಿ ಬಳಿ ಓಡಿ ಹೋಗಿ, ಪರಿಸ್ಥಿತಿಯನ್ನು ಹೇಳಿದೆ. ಆದರೆ, ಮೈಸೂರಿನಿಂದ ಆಕ್ಸಿಜನ್ ಇನ್ನೂ ಬಂದಿಲ್ಲ ಎಂದು ಅವರು ಹೇಳಿದರು. ಕೊನೆಗೆ ಎರಡು ಗಂಟೆಗಳ ಕಾಲ ತನ್ನ ಪತಿ ಹೋರಾಡಿ ನನ್ನ ಕಣ್ಣೇದುರಲ್ಲಿಯೇ ಪ್ರಾಣಬಿಟ್ಟರು ಎಂದು ಸಿದ್ದರಾಜಮ್ಮ ಹೇಳಿದರು.

ಜಯಶಂಕರ್ ಅವರಿಗೆ ಕೋವಿಡ್-19 ನೆಗೆಟಿವ್ ವರದಿ ಬಂದಿತ್ತು. ಆದರೆ, ಅಧಿಕ ಜ್ವರದಿಂದ ಏಪ್ರಿಲ್ 27 ರಂದು ಕೊಳ್ಳೇಗಾಲದ ಆಸ್ಪತ್ರೆಯೊಂದಕ್ಕೆ ಆಡ್ಮೀಟ್ ಮಾಡಲಾಗಿತ್ತು.ಆಕ್ಸಿಜನ್ ಪ್ರಮಾಣ ತೀವ್ರವಾಗಿ ಕುಸಿಯಲು ತೊಡಗಿದಾಗ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದೌಡಾಯಿಸಿದ್ದೇವು. ಆದರೆ, ಅಲ್ಲಿ ಬೆಡ್ ಇಲ್ಲ ಅಂತಾ ಹೇಳಿದ್ದರು. ಡಾಕ್ಟರ್ ಒಬ್ಬರನ್ನು ಬೇಡಿಕೊಂಡ ನಂತರ, ಸ್ಟ್ರೇಚರ್ ಮೇಲೆ ನನ್ನ ಪತಿಯನ್ನು ಮಲಗಿಸಿ, ಎರಡು ದಿನ ಆಕ್ಸಿಜನ್ ನೀಡಿದ್ದರು. ಕೋವಿಡ್ ರೋಗಿಯೊಬ್ಬರು ಮೃತಪಟ್ಟ ನಂತರ ಬೆಡ್ ನೀಡಲಾಗಿತ್ತು. ಬೆಡ್ ಶುಚಿಗೊಳಿಸಲು ಆಸ್ಪತ್ರೆಯಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ. ಅದನ್ನು ನಾನು ಮಾಡಿದ್ದೆ. ಮೂರ್ನಾಲ್ಕು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಅಂತಾ ಡಾಕ್ಟರ್ ಹೇಳಿದ್ದರು ಆದರೆ, ಮೇ 2 ರಂದು ದೊಡ್ಡ ದುರಂತವೇ ಸಂಭವಿಸಿತು ಎಂದು ನೊಂದ ಮಹಿಳೆ ಆಸ್ಪತ್ರೆ ಪರಿಸ್ಥಿತಿಯನ್ನು ವಿವರಿಸಿದರು.

ಆಸ್ಪತ್ರೆಯಲ್ಲಿ ಮೃತಪಟ್ಟವರ ಪಟ್ಟಿಯಲ್ಲಿ ಜಯಶಂಕರ್ ಅವರ ಹೆಸರನ್ನು ಸೇರಿಸಿಲ್ಲ. ಇದೀಗ ನನ್ನ ಕುಟುಂಬವನ್ನು ನೋಡಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಉದ್ಯೋಗ ನೀಡಬೇಕು ಮತ್ತು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು ಎಂದು ಸಿದ್ದರಾಜಮ್ಮ ಮನವಿ ಮಾಡಿಕೊಂಡಿದ್ದಾರೆ. ಮೃತರ ಕುಟುಂಬಸ್ಥರನ್ನು ಶಾಸಕ ಎನ್. ಮಹೇಶ್ ಭೇಟಿ ಮಾಡಿದ್ದು,  ಮೃತರ ಪಟ್ಟಿಯಲ್ಲಿ ಜಯಶಂಕರ್ ಹೆಸರು ಸೇರಿಸುವುದಾಗಿ ಹೇಳಿದ್ದಾರೆ.

SCROLL FOR NEXT