ರಾಜ್ಯ

ಮೃತ ವ್ಯಕ್ತಿಗಳ ಹೆಸರಿನಲ್ಲಿ ಬೆಡ್ ಮುಂದುವರೆಸುತ್ತಿರುವ ಆಸ್ಪತ್ರೆಗಳ ಹೆಸರು ನಾಳೆ ಬಹಿರಂಗ: ಅಶೋಕ್

Lingaraj Badiger

ಬೆಂಗಳೂರು: ಕೆಲ ಆಸ್ಪತ್ರೆಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಬೆಡ್ ಮುಂದುವರೆಸುತ್ತಿರುವವರ ಬಗ್ಗೆ ಪರಿಶೀಲನೆ ನಡೆಸಿ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ನಾಳೆ ಅಂತಹ ಖಾಸಗಿ ಆಸ್ಪತ್ರೆಗಳ ಹೆಸರನ್ನು ಬಹಿರಂಗ ಪಡಿಸುವುದಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಜವಾಬ್ದಾರಿ ಹೊತ್ತಿರುವ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, 100ಕ್ಕೂ ಹೆಚ್ಚಿನ ಹಾಸಿಗೆಯುಳ್ಳ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿ, ಕಣ್ಣಾ ಮುಚ್ಚಾಲೇ ಆಟ ಬಿಟ್ಟು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ನೀಡಬೇಕಾದ ಹಾಸಿಗೆಗಳನ್ನು ಕೊಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಇನ್ನೆರಡು ದಿನದಲ್ಲಿ ಕೊಡದಿದ್ದರೆ ಓಪಿಡಿ ಬಂದ್ ಮಾಡಿಸುವುದಾಗಿ ಖಡಕ್ ಎಚ್ಚರಿಕೆ ನೀಡಿರುವುದಾಗಿ ಹೇಳಿದರು.

ಬಿಬಿಎಂಪಿಯಿಂದ ಬಿಯೂ ನಂಬರ್ ನೀಡಿದರೂ ಬೆಡ್ ಇನ್ನು ಖಾಲಿ ಆಗಿಲ್ಲ ಎಂದು ರೋಗಿಗಳನ್ನು ಹೊರಗೆ ಇರಿಸುವ ಕೆಲಸ ಆಗುತ್ತಿದೆ. ಸೋಂಕಿತರನ್ನು ಆಸ್ಪತ್ರೆಯ ಒಳಗೆ ಇರಿಸಬೇಕು. ತಪಾಸಣೆಗೆ ಆಸ್ಪತ್ರೆಗಳು ಹೆಚ್ಚಿನ ಶುಲ್ಕ ಪಡೆಯಬಾರದೆಂದು ಸೂಚನೆ ನೀಡಿದ್ದೇವೆ. ಇದಕ್ಕಾಗಿ ಕೆಲವು ಅಧಿಕಾರಿಗಳನ್ನ ಬದಲಾವಣೆ ಮಾಡಿದ್ದೇವೆ. ತುಷಾರ್ ಗಿರಿನಾಥ್ ಅವರನ್ನು ಚೀಫ್ ನೂಡಲ್ ಆಫೀಸರ್ ಬೆಡ್ ಅಲಾಟ್ ಮೆಂಟ್ ಜವಬ್ದಾರಿ ನೀಡಿದ್ದೇವೆ ಎಂದರು.

ಬೆಡ್ ಮ್ಯಾನೇಜ್ ಮೆಂಟ್ - ಮಂಜುನಾಥ್ ಪ್ರಸಾದ್ ಅವರಿಗೆ ನೀಡಿದ್ದೇವೆ. ಇವತ್ತಿಂದಲೇ ಅವರು ಕಾರ್ಯ ನಿರ್ವಹಿಸುತ್ತಾರೆ. ಇನ್ನು ಮುಂದೆ ಬೆಡ್ ಅಲಾಟ್ಮೆಂಟ್ ಬಗ್ಗೆ ಪಾರದರ್ಶಕತೆ ಇರುತ್ತದೆ ಎಂದು ಅಶೋಕ್ ಹೇಳಿದರು.

ಕೊರೋನಾ ಚಿಕಿತ್ಸೆ ಮುಗಿದಿದ್ರೂ ಅವರನ್ನು ಮುಂದುವರೆಸುತ್ತಿರುವ ಕೆಲಸವನ್ನು ಖಾಸಗಿ ಆಸ್ಪತ್ರೆಗಳು ಮಾಡುತ್ತಿವೆ. ಆದರೆ 10 ದಿನ ಕಳೆದ ಬಳಿಕ ಚಿಕಿತ್ಸೆ ಮುಂದುವರೆಸಬೇಕಾದರೆ ಬಿಬಿಎಂಪಿಯ ಅನುಮತಿ ಪಡೆಯಬೇಕು. ಮೂರು ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಓಪಿಡಿ ಬಂದ್ ಮಾಡಲು ಸೂಚಿಸುತ್ತೇನೆ. ನಾವು ಬದಲಾವಣೆ ತರಲು ಹೊರಟ್ಟಿದ್ದೇವೆ, ಹಾಸಿಗೆ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಸಚಿವ ಅಶೋಕ್ ಸ್ಪಷ್ಟಪಡಿಸಿದರು.

SCROLL FOR NEXT