ರಾಜ್ಯ

ಗೊಂದಲ ಬಳಿಕ ಕೊನೆಗೂ ಕೆಜಿಎಫ್'ಗೆ ಬಂದಿಳಿದ ಇಸ್ರೇಲ್'ನ ಆಕ್ಸಿಜನ್ ಘಟಕ

Manjula VN

ಕೋಲಾರ: ಪ್ರತಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಇಸ್ರೇಲಿನ ಆಮ್ಲಜನಕ ಉತ್ಪಾದನಾ ಘಟಕ ಸ್ಥಳಾಂತರ ಗೊಂದಲಗಳ ಬಳಿಕ ಕೊನೆಗೂ ಕೋಲಾರ ಕೆಜಿಎಫ್'ಗೆ ಬಂದಿಳಿದಿದೆ. 

ಬೃಹತ್ ಆಕ್ಸಿಜನ್ ಉತ್ಪಾದನಾ ಘಟಕವನ್ನು ಎನ್'ಡಿಆರ್'ಎಫ್ ಸಿಬ್ಬಂದಿಯ ಬಂದೋಬಸ್ತ್ ನಲ್ಲಿ ಕೆಜಿಎಫ್ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸೋಮವಾರ ತಂದು ಇಳಿಸಲಾಗಿದೆ. 

ಕಳೆದ ರಾತ್ರಿ ಜಕ್ಕೂರು ವಿಮಾನ ನಿಲ್ದಾಣಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಬಂದ ಆಕ್ಸಿಜನ್ ಉತ್ಪಾದನಾ ಯಂತ್ರ ಒಳಗೊಂಡಿದ್ದ ಕಂಟೇನರ್'ನ್ನು ನಂತರ ಟ್ರಕ್ ಮೂಲಕ ಇಂದು ಬೆಳಗಿನ ಜಾವ 5 ಗಂಟೆಗೆ ಎನ್'ಡಿಆರ್'ಎಫ್ ಸಿಬ್ಬಂದಿಯ ಬಂದೋಬಸ್ತ್'ನಲ್ಲಿ ಬಂದಿಳಿಸಲಾಯಿತು. 

ಇಸ್ರೇಲ್ ದೇಶವು ಮೂರು ಆಕ್ಸಿಜನ್ ಪ್ಲಾಂಟ್'ಗಳನ್ನು ನೀಡಿತ್ತು. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ಈ ಮೂರು ಘಟಕಗಳಲ್ಲಿ ಒಂದನ್ನು ಉತ್ತರಪ್ರದೇಶದ ವಾರಣಾಸಿ ಮತ್ತೊಂದು ಮೈಸೂರಿನ ಹೆಚ್.ಡಿ.ಕೋಟೆ ಹಾಗೂ ಕೋಲಾರ ಜಿಲ್ಲೆಯ ಕೆಜಿಎಫ್'ನಲ್ಲಿ ತೆರೆಯಲು ಆದೇಶ ನೀಡಿತ್ತು. ಆದರೆ, ಕೋಲಾರಕ್ಕೆ ಬಿಡುಗಡೆಯಾಗಿದ್ದ ಆಕ್ಸಿಜನ್ ಉತ್ಪಾದನಾ ಯಂತ್ರವನ್ನು ರಾತ್ರೋ ರಾತ್ರಿ ಕೆಲವು ರಾಜಕೀಯ ಪ್ರಭಾವ ಬಳಸಿ ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಲು ಸಾಕಷ್ಟು ಪ್ರಯತ್ನಗಳು ನಡೆದಿತ್ತು. ಇದು ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿತ್ತು. 

ಕೂಡಲೇ ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಮಾಹಿತಿ ನೀಡಿ ಕೆಜಿಎಫ್ ನಲ್ಲಿಯೇ ಆಕ್ಸಿಜನ್ ಘಟಕ ಸ್ಥಾಪಿಸಬೇಕೆಂದು ಆಗ್ರಹಿಸಿದರು ಎಂದು ತಿಳಿದುಬಂದಿದೆ. 

ಆಕ್ಸಿಜನ್ ಘಟಕ ಸ್ಥಾಪನೆ ಕುರಿತ ಕಾಮಗಾರಿ ಕಾರ್ಯಗಳು 2-3 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಈ ಕಾರ್ಯದ ಜವಾಬ್ದಾರಿಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್ ಹಾಗೂ ಇಬ್ಬರು ಎಂಜಿನಿಯರ್'ಗಳಿಗೆ ನೀಡಲಾಗಿದೆ ಎಂದು ಕೋಲಾರ ಡಿಸಿ ಸೆಲ್ವಮಣಿಯವರು ಹೇಳಿದ್ದಾರೆ. 

ಇಸ್ರೇಲ್ ನಿಂದ ದೇಶಕ್ಕೆ ನೀಡಲಾಗಿರುವ ಈ ಮೂರು ಆಕ್ಸಿಜನ್ ಉತ್ಪಾದನಾ ಘಟಕ ಸಾಕಷ್ಟು ಉಪಯುಕ್ತವಾಗಿದ್ದು, ಇದು ಪ್ರತಿ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದೊಂದು ಸಣ್ಣ ಆಕ್ಸಿಜನ್ ಉತ್ಪಾದನಾ ಯಂತ್ರವೊಂದು ನಿರಾಯಾಸವಾಗಿ ಕನಿಷ್ಠ 100 ಬೆಡ್'ಗಳಿಗೆ ಆಕ್ಸಿಜನ್ ನೀಡಬಲ್ಲದು. ಹಾಗಾಗಿ ಕೆಜಿಎಫ್ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇದನ್ನು ಸ್ಥಾಪನೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಇದು ಕೆಜಿಎಫ್ ಆಸ್ಪತ್ರೆ ಜೊತೆಗೆ ಅಕ್ಕಪಕ್ಕದ ತಾಲೂಕಿಗೂ ಆಕ್ಸಿಜನ್ ಸರಬರಾಜು ಮಾಡುವ ಮೂಲಕ ಸಾಕಷ್ಟು ಅಕ್ಸಿಜನ್ ಕೊರತೆಯನ್ನೂ ನಿವಾರಣೆ ಮಾಡಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT