ರಾಜ್ಯ

ಕೋವಿಡ್ ಗೆ ತಂದೆ ಬಲಿ: ಆಸ್ಪತ್ರೆ ನಿರ್ಲಕ್ಷ್ಯ ಆರೋಪಿಸಿ ಕುಟುಂಬಸ್ಥರಿಂದ 4 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಯಂತ್ರ ಧ್ವಂಸ

Srinivasamurthy VN

ಬೆಂಗಳೂರು: ರೈಲ್ವೆ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಸಾವಿನ ಕುರಿತಂತೆ ತೀವ್ರ ಅಸಮಾಧಾನಗೊಂಡಿದ್ದ ಅವರ ಹೆಣ್ಣುಮಕ್ಕಳು ಐಸಿಯು ವಾರ್ಡ್‌ನಲ್ಲಿದ್ದ ಸುಮಾರು 4 ಲಕ್ಷ ರೂ ಮೌಲ್ಯದ ಆಕ್ಸಿಜನ್ ಯಂತ್ರವನ್ನು ಧ್ವಂಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ವೃತ್ತಿಯಿಂದ ನಿವೃತ್ತರಾಗಿದ್ದ 61 ವರ್ಷದ ವ್ಯಕ್ತಿ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳವಾರ ರೈಲ್ವೇ ಆಸ್ಪತ್ರೆಯ ಐಸಿಯು ವಾರ್ಡ್‌ಗೆ ದಾಖಲಿಸಲಾಗಿತ್ತು. ಅದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಆದರೆ ತಂದೆ ಸಾವಿನ ನೋವನ್ನು  ಜೀರ್ಣಿಸಿಕೊಳ್ಳಲಾಗದ ಅವರ ಪುತ್ರಿಯರು ಮತ್ತು ಕುಟುಂಬ ಸಂಜೆ 4.30 ರ ಸುಮಾರಿನಲ್ಲಿ ಐಸಿಯು ವಾರ್ಡ್ ನಲ್ಲಿ  ಆಕ್ಸಿಜನ್ ಯಂತ್ರವನ್ನು ಧ್ವಂಸ ಮಾಡಿದ್ದಾರೆ. ಅಂತೆಯೇ ತಮ್ಮ ತಂದೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಮೃತ ವ್ಯಕ್ತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿ ಇದ್ದು, ತಂದೆ ಸಾವಿನ ವಿಚಾರವಾಗಿ ಹೆಣ್ಣುಮಕ್ಕಳಿಬ್ಬರೂ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಜಗಳ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಸಿಟ್ಟಿನಿಂದ ಐಸಿಯು ವಾರ್ಡ್ ನಲ್ಲಿದ್ದ ಮೂಗಿನ ಮೂಲಕ ಆಮ್ಲಜನಕ ಸರಬರಾಜು ಮಾಡುವ ಹೈ ಫ್ಲೋ ಆಕ್ಸಿಜನ್ ಉಪಕರಣವನ್ನು  ಅವರು ಧ್ವಂಸ ಮಾಡಿದ್ದಾರೆ. ಇದರ ಬೆಲೆ ಸುಮಾರು 4 ಲಕ್ಷ ರೂ ಎಂದು ಹೇಳಲಾಗಿದೆ.

ಇನ್ನು ಮೃತರ ಕುಟುಂಬಸ್ಥರ ನಿರ್ಲಕ್ಷ್ಯದ ಆರೋಪವನ್ನು ಆಸ್ಪತ್ರೆ ಅಧಿಕಾರಿಗಳು ತಳ್ಳಿ ಹಾಕಿದ್ದು, ರೋಗಿಯನ್ನು ಆಸ್ಪತ್ರೆಗೆ ಕರೆತಂದಾಗಲೇ ಅವರ ಆರೋಗ್ಯ ತೀರಾ ಗಂಭೀರವಾಗಿತ್ತು. ಅವರ ಆಮ್ಲಜನಕದ ಮಟ್ಟವು 70 ಕ್ಕಿಂತ ಕಡಿಮೆಯಿತ್ತು. ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲೇ ಅವರ ಎದೆಯ CT ಸ್ಕ್ಯಾನ್  ಸ್ಕೋರ್ 22/25 ಅನ್ನು ಸಹ ತೋರಿಸಿತ್ತು. ಇದು ಅತ್ಯಂತ ಗಂಭೀರ ಸ್ಥಿತಿಯಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಮೂಲಗಳ ಪ್ರಕಾರ, ಕುಟುಂಬ ಸದಸ್ಯರು ಮಂಗಳವಾರ ತಮ್ಮ ತಂದೆಗೆ ತಿನಿಸಲು ಮನೆಯಿಂದ ಆಹಾರವನ್ನು ತಂದಿದ್ದರು. ಆದರೆ ಅವರನ್ನು ಆಸ್ಪತ್ರೆ ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ. ಇದರಿಂದ ಹೆಣ್ಣುಮಕ್ಕಳು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ತೀವ್ರ ಸಿಟ್ಟಾಗಿದ್ದರು ಎನ್ನಲಾಗಿದೆ. ಆದರೆ ಇದನ್ನೂ ಆಸ್ಪತ್ರೆ  ಸಿಬ್ಬಂದಿ ತಳ್ಳಿ ಹಾಕಿದ್ದು, ಅಂತಹ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಮೀರಾ ಪಾಟೀಲ್ ಹೇಳಿದ್ದಾರೆ. 
 

SCROLL FOR NEXT