ರಾಜ್ಯ

ಟೌಕ್ಟೇ ಚಂಡಮಾರುತ: ಕರಾವಳಿ, ಮಲೆನಾಡು ಭಾಗದ 6 ಜಿಲ್ಲೆಗಳಲ್ಲಿ ಭಾರೀ ಮಳೆ, 4 ಮಂದಿ ಸಾವು

Sumana Upadhyaya

ಬೆಂಗಳೂರು: ಟೌಕ್ಟೇ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಜಿಲ್ಲೆ ನಲುಗಿ ಹೋಗಿದೆ. ಕಳೆದ 24 ಗಂಟೆಯಿಂದ ಮೂರು ಕರಾವಳಿ ಜಿಲ್ಲೆಗಳು ಮತ್ತು ಮೂರು ಮಲೆನಾಡು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ಮಳೆಯಾಗುತ್ತಿದೆ.

ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಇದುವರೆಗೆ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 73 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ತಿಳಿಸಿದೆ.

ಭಾರತೀಯ ಹವಾಮಾನ ಇಲಾಕೆ ಟೌಕ್ಟೇ ಚಂಡಮಾರುತ ಹಿನ್ನೆಲೆಯಲ್ಲಿ ಮಂಗಳೂರು, ಕಾರವಾರ, ಮಲ್ಪೆ, ಭಟ್ಕಳ, ಹೊನ್ನಾವರ ಹಾಗೂ ಕೇರಳದ ತಿರುವನಂತಪುರಗಳಿಗೆ ಮುನ್ನೆಚ್ಚರಿಕೆ ಘೋಷಿಸಿದೆ. ಮಲ್ಪೆ ಬೀಚ್ ಬಳಿ ಚಂಡಮಾರುತದ ರಭಸಕ್ಕೆ ತೀರದಲ್ಲಿರುವ ಮೀನುಗಾರಿಕೆ ದೋಣಿಗಳು ಹಾನಿಗೊಳಗಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು, ತೆಂಗು, ಕಂಗು ತೋಟಗಳಿಗೂ ನೀರು ನುಗ್ಗಿದೆ, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.

SCROLL FOR NEXT