ರಾಜ್ಯ

ಆಯುಷ್ಮಾನ್ ಭಾರತದಲ್ಲಿ ಕರ್ನಾಟಕ ರಾಜ್ಯ ದೇಶಕ್ಕೇ ನಂ.1

Manjula VN

ಬೆಂಗಳೂರು: ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ ಅಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, 2020-21ನೇ ಸಾಲಿನ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 95 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.

ರಾಜ್ಯದಲ್ಲಿ 9,000 ಆರೋಗ್ಯ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಒಟ್ಟು 11,595 ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರ ಈ ಯೋಜನೆಯನ್ನು ಅಳವಡಿಸಿಕೊಂಡಿದೆ.

ಕೇಂದ್ರ ಸರ್ಕಾರ 2,263 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಗುರಿ ನೀಡಿದ್ದರೆ ರಾಜ್ಯ ಸರ್ಕಾರ 3,300 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಶೇ.146ರ ಗುರಿ ಸಾಧನೆ ಮಾಡಿದೆ. 

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2,096 ಮೇಲ್ದರ್ಜೆಗೆ ಏರಿಸುವ ಗುರಿ ಇದ್ದರೂ 2,196 ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಶೇ. 103, 294 ನಗರ ಆರೋಗ್ಯ ಕೇಂದ್ರಗಳನ್ನು ಉನ್ನತಿಕರಿಸುವ ಗುರಿ ನೀಡಿದ್ದರೂ 364 ಆರೋಗ್ಯ ಕೇಂದ್ರಗಳಲ್ಲಿ ಯೋಜನೆಯನ್ನು ಜಾರಿಗೊಳಿಸಿ ಶೇ.124ರ ಸಾಧನೆ ಮಾಡಲಾಗಿದೆ. ಒಟ್ಟು 4,653 ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸ್ಥಾಪಿಸುವ ಗುರಿಯನ್ನು ಕೇಂದ್ರ ನೀಡಿದ್ದು, 5,832 ಕೇಂದ್ರ ಆರಂಭಿಸಿ ಶೇ.125ರ ಸಾಧನೆ ಮಾಡಲಾಗಿದೆ.

ಈ ಸಾಧನೆಗೆ ಆರೋಗ್ಯ ಸಚಿವ ಸುಧಾಕರ್ ಅವರು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಗ್ರಾಮೀಣ ಜನರು ಆರೋಗ್ಯ ಸೇವೆಗಾಗಿ ದೂರದ ನಗರಗಳಿಗೆ ಅಲೆಯುವುದನ್ನು ತಪ್ಪಿಸಿ ತಮ್ಮ ಮನೆಯ ಸಮೀಪ ಆರೋಗ್ಯ ಸೇವೆ ಪಡೆಯಬೇಕು ಎಂಬುದು ಸರ್ಕಾರದ ಗುರಿ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಈ ನಿಟ್ಟಿನಲ್ಲಿ ಯಶಸ್ವಿಯಾಗಿವೆ. ಈ ಸಾಧನೆಗಾಗಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆಂದು ಹೇಳಿದ್ದಾರೆ.

SCROLL FOR NEXT