ರಾಜ್ಯ

ಚಾಮರಾಜನಗರ ಆಮ್ಲಜನಕ ದುರಂತ: ಸಂತ್ರಸ್ತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

Raghavendra Adiga

ಬೆಂಗಳೂರು: ಚಾಮರಾಜನಗರ ಆಮ್ಲಜನಕ ದುರಂತದಲ್ಲಿ ಬಲಿಯಾದ 24 ಜನರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ರಾಜ್ಯ ಸರ್ಕಾರ ಗುರುವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ವಿಶೇಷ ವಿಭಾಗೀಯ ಪೀಠದ ಮುಂದೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ಈ ಬಗ್ಗೆ ಹೇಳಿದ್ದಾರೆ. ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ 24 ಕೋವಿಡ್ ರೋಗಿಗಳ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಕೋರ್ಟ್ ಗೆ ಮಾಹಿತಿ ಸಲ್ಲಿಸಿದ್ದಾರೆ.

ಆಮ್ಲಜನಕದ ಕೊರತೆಯಿಂದಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೇ 2 ಮತ್ತು 3 ರಂದು ಒಟ್ಟು 24 ರೋಗಿಗಳು ಸಾವನ್ನಪ್ಪಿದ್ದರು. 

ನ್ಯಾಯಾಲಯ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎ.ಎ.ವೇಣುಗೋಪಾಲ ಗೌಡರ ನೇತೃತ್ವದಲ್ಲಿ ರಚಿಸಿದ ಸಮಿತಿಯು ಆಮ್ಲಜನಕದ ಕೊರತೆಯಿಂದಾಗಿ ಸಾವಾಗಿದೆ ಎಂದು ದೃಢಪಡಿಸಿದೆ. ಅಲ್ಲದೆ ಈ ದುರಂತಕ್ಕೆ ಜಿಲ್ಲಾಡಳಿತದ ಅಸಡ್ಡೆ ಕಾರಣವೆಂದು  ಹೇಳಿದ ಸಮಿತಿಯು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸುಗಳನ್ನು ಗಮನಿಸಿ ನ್ಯಾಯಾಲಯವು ಪರಿಹಾರವನ್ನು ಪಾವತಿಸುವ ಬಗ್ಗೆ ನಿಲುವು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಅದರಂತೆ ಅಡ್ವೊಕೇಟ್ ಜನರಲ್ ಅವರು ಸರ್ಕಾರದ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪರಿಹಾರವನ್ನು ಪಾವತಿಸಲು ನ್ಯಾಯಾಲಯದ ಅನುಮತಿಯನ್ನು ಕೋರಿದರು. ಅಡ್ವೊಕೇಟ್ ಜನರಲ್ ಮಾತುಗಳನ್ನು ಕೇಳಿದ  ನ್ಯಾಯಾಲಯ, ತಕ್ಷಣ ಪರಿಹಾರವನ್ನು ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಆದಾಗ್ಯೂ, ಅರ್ಜಿದಾರರ ಪರವಾಗಿ ನಿಜವಾಗಿ ಈ ಪ್ರಕರಣದಲ್ಲಿ 24 ಕ್ಕಿಂತ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದಾಗ ಸಾವಿನ ಸಮಸ್ಯೆಯನ್ನು ಪರಿಶೀಲಿಸುವುದಾಗಿ ಕೋರ್ಟ್ ಹೇಳಿದೆ. ಸಮಿತಿಯ ವರದಿಯ ಪ್ರಕಾರ ಘಟನೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಡ್ವೊಕೇಟ್ ಜನರಲ್ ಜೇಳಿದ್ದಾರೆ.

SCROLL FOR NEXT