ರಾಜ್ಯ

ಕ್ರಿಶ್ಚಿಯನ್ನರ ವಿರುದ್ಧ ಸುಳ್ಳು ಹೇಳಿಕೆ: ಶೋಭಾ ಕರಂದ್ಲಾಜೆ ವಿರುದ್ಧ ಐವಾನ್ ಡಿಸೋಜಾ ದೂರು ದಾಖಲು!

Nagaraja AB

ಮಂಗಳೂರು: ಕ್ರಿಶ್ಚಿಯನ್ನರು ಕೋವಿಡ್-19 ವಿರುದ್ಧದ ಲಸಿಕೆ ತೆಗೆದುಕೊಳ್ಳದಂತೆ ಆ ಸಮುದಾಯದ ಮುಖಂಡರು ಸಲಹೆ ನೀಡಿದ್ದಾರೆ ಎಂಬ ಸುಳ್ಳು ಹೇಳಿಕೆಗಾಗಿ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಗುರುವಾರ ದೂರು ದಾಖಲಿಸಿದ್ದಾರೆ.

ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಮಂಗಳೂರು ಡಯೋಸೆಸ್, ಉಡುಪಿ ಕ್ಯಾಥೊಲಿಕ್ ಸಭಾ ಮತ್ತು ಮಲಂಕರ ಆರ್ಥೊಡಾಕ್ಸ್ ಚರ್ಚ್  ಖಂಡಿಸಿವೆ. ಕ್ರಿಶ್ಚಿಯನ್ ಸಮುದಾಯವನ್ನು ದೇಶ ವಿರೋಧಿಗಳೆಂದು ಶೋಭಾ ಕರಂದ್ಲಾಜೆ ಆರೋಪಿಸಿರುವುದು ದೇಶದ ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆಯಾಗಿದೆ ಎಂದು ಡಿಸೋಜಾ ಹೇಳಿದರು.

ರಾಜಕೀಯ ಹಿತಾಸಕ್ತಿಯಿಂದ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸಲು ಶೋಭಾ ಕರಂದ್ಲಾಜೆ ಪ್ರಯತ್ನಿಸಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು. ನಗರ ಪೊಲೀಸ್ ಆಯುಕ್ತರು ಮತ್ತು ಪಂಡೇಶ್ವರ್ ಪೊಲೀಸ್ ಇನ್ಸ್ ಪೆಕ್ಟರ್ ಅವರಿಗೆ ದೂರನ್ನು ಸಲ್ಲಿಸಲಾಗಿದೆ.

ಚಿಕ್ಕಮಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಮಲೆನಾಡು ವಲಯದ ಚರ್ಚ್ ಗಳಲ್ಲಿ ಕೋವಿಡ್-19 ಲಸಿಕೆ ಪಡೆಯದಂತೆ ಕ್ರಿಶ್ಚಿಯನ್ನರಿಗೆ ಸಲಹೆ ನೀಡಲಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಈ ವಿಚಾರದಲ್ಲಿ ಕ್ಯಾಥೋಲಿಕ್ ಸಮುದಾಯದವರ ತಪ್ಪಿಲ್ಲ. ಆದರೆ, ಪೆಂಟೆಕೋಸ್ಟ್ ನಂತಹವರು ಜನರನ್ನು ಹಾದಿ ತಪ್ಪಿಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದರು. ಶೋಭಾ ಕರಂದ್ಲಾಜೆ ಅವರ ಹೇಳಿಕೆ ತಪ್ಪಿನಿಂದ ಕೂಡಿದ್ದು, ನೋವು ತಂದಿದೆ ಎಂದು ಮಂಗಳೂರು ಡಯೋಸೆಸ್ ಹೇಳಿಕೆಯಲ್ಲಿ ತಿಳಿಸಿದೆ. 

SCROLL FOR NEXT