ರಾಜ್ಯ

ಕೋವಿಡ್-19: ಸಂಬಂಧಿಕರಿಗೆ ಶವ ಹಸ್ತಾಂತರಿಸುವ ವೇಳೆ ಆಸ್ಪತ್ರೆಯವರು ಬಾಕಿ ಬಿಲ್ ಪಾವತಿಗೆ ಒತ್ತಾಯಿಸುವಂತಿಲ್ಲ

Nagaraja AB

ಬೆಂಗಳೂರು: ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ವೇಳೆ ಆಸ್ಪತ್ರೆಯವರು ಬಾಕಿ ಬಿಲ್ ಪಾವತಿಗೆ ಒತ್ತಾಯಿಸುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ.

ರಾಜ್ಯದ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಸೋಂಕಿತರು ಮೃತಪಟ್ಟು , ಆಸ್ಪತ್ರೆಯ ಹಾಗೂ ಚಿಕಿತ್ಸೆಯ ಬಾಕಿ ವೆಚ್ಚವನ್ನು ಪಾವತಿಸಿದ  ನಂತರವೇ ಶವವನ್ನು ಸಂಬಂಧಿಕರಿಗೆ ನೀಡುವಂತೆ ಷರತ್ತನ್ನು ವಿಧಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈ ಬಗ್ಗೆ ಆದೇಶಿಸಿದೆ.

 ಕರ್ನಾಟಕ ಪ್ರೈವೇಟ್ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್ ಆಕ್ಸ್ ( ಕೆಪಿಎಂಇ ) , 2007 ಭಾಗ 11 ( 1 ) ಉಪ ಷರತ್ತು ( vi ) ರ ಅನ್ವಯ , ಮೃತ ವ್ಯಕ್ತಿಯ ದೇಹವನ್ನು ಹಸ್ತಾಂತರಿಸುವ ವೇಳೆ ಆಸ್ಪತ್ರೆಯ ಬಾಕಿ ಬಿಲ್ ಪಾವತಿಗೆ ಒತ್ತಾಯಿಸುವಂತಿಲ್ಲ .ಒತ್ತಡ ಹೇರುವಂತಿಲ್ಲ ಹಾಗೂ ಬಿಲ್ ಪಾವತಿ ಮಾಡದೆ ಇದ್ದ ಪಕ್ಷದಲ್ಲಿ  ಮೃತದೇಹದ ಹಸ್ತಾಂತರ ಮಾಡಲು ನಿರಾಕರಿಸುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ . 

ಇಂತಹ ಪ್ರಕರಣಗಳು ವರದಿಯಾದಲ್ಲಿ ಕೆಪಿಎಂಇ ಕಾಯ್ದೆಯ ನಿಯಮಾನುಸಾರ ಸದರಿ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ರೀತಿ ವರದಿಯಾದ ಪ್ರಕರಣಗಳ ಮಾಹಿತಿ ಹಾಗೂ ಕೈಗೊಂಡ ಕ್ರಮಗಳ ಕುರಿತು ವಾರಕ್ಕೆ ಒಂದು ಬಾರಿ, ರಾಜ್ಯ ಮಟ್ಟಕ್ಕೆ ವರದಿ ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಬಿಬಿಎಂಪಿ ವಿಶೇಷ ಆಯುಕ್ತರುಗಳಿಗೆ ಸೂಚಿಸಿದ್ದಾರೆ.

SCROLL FOR NEXT