ರಾಜ್ಯ

ಮಠಗಳಲ್ಲಿ ಅಪ್ರಾಪ್ತರನ್ನು ಒತ್ತಾಯಪೂರ್ವಕವಾಗಿ ಸನ್ಯಾಸಿ ಮಾಡುತ್ತಿದ್ದರೂ ಸರ್ಕಾರ ಮೂಕ ಪ್ರೇಕ್ಷಕನಂತೆ ಕೂರುವಂತಿಲ್ಲ: ಹೈಕೋರ್ಟ್

Manjula VN

ಬೆಂಗಳೂರು: ಮಠಗಳಲ್ಲಿ ಅಪ್ರಾಪ್ತರನ್ನು ಒತ್ತಾಯಪೂರ್ವಕವಾಗಿ ಸನ್ಯಾಸಿಗಳನ್ನಾಗಿಸುತ್ತಿದ್ದರೂ ಸರ್ಕಾರ ಮೂಕ ಪ್ರೇಕ್ಷಕನಂತೆ ಕೂರುವಂತಿಲ್ಲ. ಈ ಕುರಿತು ಪರಿಶೀಲನೆ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. 

ಉಡುಪಿಯ ಶ್ರೀ ಶಿರೂರು ಮಠದ ಪೀಠಾ​ಧಿಪತಿಯಾಗಿ ಅಪ್ರಾಪ್ತರನ್ನು ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. 

ಅರ್ಜಿದಾರರ ಪರ ವಕೀಲ ಡಿ.ಆರ್‌. ರವಿಶಂಕರ್‌ ವಾದ ಮಂಡಿಸಿ, 16 ವರ್ಷದ ಬಾಲಕನನ್ನು ಪೀಠಾಧಿ​ಪತಿಯಾಗಿ ನೇಮಕ ಮಾಡಲಾಗಿದ್ದು, ಬಲವಂತವಾಗಿ ಸನ್ಯಾಸಿ ಮಾಡಲಾಗಿದೆ. 18 ವರ್ಷ ತುಂಬದವರು ನೀಡುವ ಸಮ್ಮತಿಗೂ ಮಾನ್ಯತೆ ಇಲ್ಲ. ಪ್ರಕರಣದಲ್ಲಿ ಅಪ್ರಾಪ್ತರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಅಲ್ಲದೆ, ಅರ್ಜಿಯಲ್ಲಿರುವ ಮನವಿಗಳನ್ನು ತಿದ್ದುಪಡಿ ಮಾಡಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಅರ್ಜಿಯಲ್ಲಿ ಅಪ್ರಾಪ್ತರ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಸರ್ಕಾರ ಈ ವಿಚಾರದಲ್ಲಿ ಮೂಕ ಪ್ರೇಕ್ಷಕನಂತೆ ವರ್ತಿಸಬಾರದು ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಅಲ್ಲದೆ, ತಿದ್ದುಪಡಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿ, ವಿಚಾರಣೆಯನ್ನು ಜೂ.2ಕ್ಕೆ ಮುಂದೂಡಿತು.

ಶಿರೂರು ಮಠದ ಆಡಳಿತಾತ್ಮಕ, ಆರ್ಥಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿ​ಸಿದಂತೆ ಯಾವುದೇ ರೀತಿಯ ನಿಯಂತ್ರಣ ಸಾಧಿಸಲು ಸೋದೆ ಮಠಕ್ಕೆ ಅವಕಾಶವಿಲ್ಲ. ಹೀಗಿದ್ದರೂ, ಪೀಠಾ​ಧಿಪತಿ ನೇಮಕ ವಿಚಾರದಲ್ಲಿ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಧ್ಯಪ್ರವೇಶಿಸಿರುವುದು ಕಾನೂನು ಬಾಹಿರ. ಶಿರೂರು ಮಠದ ಪೀಠಾ​ಪತಿ ಸ್ಥಾನಕ್ಕೆ ಯಾವುದೇ ವ್ಯಕ್ತಿಯನ್ನು ನೇಮಕ ಮಾಡಲು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರಿಗೆ ಯಾವುದೇ ಅಧಿ​ಕಾರವಿಲ್ಲ ಎಂದು ಘೋಷಿಸಬೇಕು. ಜೊತೆಗೆ, ಅಪ್ರಾಪ್ತರನ್ನು ಶಿರೂರು ಮಠದ ಪೀಠಾಧಿ​ಪತಿಯಾಗಿ ನೇಮಕ ಮಾಡಿರುವುದು ಕಾನೂನುಬಾಹಿರ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

SCROLL FOR NEXT