ರಾಜ್ಯ

ಮೇ 29 ರಿಂದ ಮೈಸೂರು ಸಂಪೂರ್ಣ ಲಾಕ್‌ಡೌನ್, ವಾರದಲ್ಲಿ 2 ದಿನ ಮಾತ್ರ ಖರೀದಿಗೆ ಅವಕಾಶ: ಡಿಸಿ ಆದೇಶ

Shilpa D

ಮೈಸೂರು: ಮೈಸೂರಿನಲ್ಲಿ ಕೋವಿಡ್ 19 ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲು ಮೈಸೂರು ಜಿಲ್ಲಾಡಳಿತ ನಿರ್ಧರಿಸಿದೆ.

ಮೇ 29ರಿಂದ ಜೂನ್ 7ರವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡುವ ಸಂಬಂಧ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಲಾಕ್‌ಡೌನ್ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಈ ಬಗ್ಗೆ ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕುಗಳ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ವಾರದಲ್ಲಿ 2 ದಿನ ಅಗತ್ಯ ವಸ್ತುಗಳಿಗೆ ಅವಕಾಶ ನೀಡಿದ್ದನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಯಾರೂ ಆತಂಕಗೊಳ್ಳದೇ ಸಮಾಧಾನದಿಂದ ವಸ್ತುಗಳನ್ನು ಖರೀದಿಸಬೇಕು. ಅಂದರೆ, ಅಂಗಡಿಗಳ ಮುಂದೆ ಗುಂಪು ಸೇರುವುದು, ಮುಗಿ ಬೀಳುವಂತಹ ಕಾರ್ಯಗಳನ್ನು ಮಾಡಬಾರದು. ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸುವುದರ ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಯನ್ನೂ ಸಹ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಲಾಗಿದೆ.

ಪ್ರತ್ಯೇಕ ಹಾಲಿನ ಬೂತ್‌ಗಳು, ವೈದ್ಯಕೀಯ ಸೇವೆಗಳು, ಹಾಪ್‌ಕಾಮ್ಸ್ ಅಡಿಯಲ್ಲಿ ಬರುವ ತರಕಾರಿ ಮತ್ತು ಹಣ್ಣಿನ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ಚಟುವಟಿಕೆಗಳಿಗೂ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಅನಗತ್ಯ ಓಡಾಟಕ್ಕೂ ಬ್ರೇಕ್ ಹಾಕಲಾಗಿದೆ.

SCROLL FOR NEXT