ರಾಜ್ಯ

ಬೆಂಗಳೂರು: ಕೋವಿಡ್ ರೋಗಿಯ ಶವವನ್ನು ಫುಟ್ ಪಾತ್ ನಲ್ಲಿ ಇಟ್ಟು ಹೋಗಿದ್ದ ಆ್ಯಂಬುಲೆನ್ಸ್ ಚಾಲಕನ ಬಂಧನ

Shilpa D

ಬೆಂಗಳೂರು: ಹೆಚ್ಚು ಹಣ ಕೊಡದಿದ್ದಕ್ಕೆ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಫುಟ್ ಪಾತ್ ನಲ್ಲಿ ಇಟ್ಟು ಪರಾರಿಯಾಗಿದ್ದ ಖಾಸಗಿ ಆ್ಯಂಬುಲೆನ್ಸ್ ಚಾಲಕನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ನಿವಾಸಿ ಶರತ್ ಬಂಧಿತ ಆ್ಯಂಬುಲೆನ್ಸ್ ಚಾಲಕ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ವ್ಯಕ್ತಿಯ ಶವವನ್ನು ಅಂತ್ಯ ಸಂಸ್ಕಾರಕ್ಕಾಗಿ ಹೆಬ್ಬಾಳದ ಚಿತಾಗಾರಕ್ಕೆ ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಗುತ್ತಿತ್ತು.

ಮೊದಲು 3 ಸಾವಿರಕ್ಕೆ ಒಪ್ಪಿಕೊಂಡಿದ್ದ ಚಾಲಕ ನಂತರ 18 ಸಾವಿರ ರೂ. ಹಣ ಕೊಡುವಂತೆ ಮೃತರ ಸಂಬಂಧಿಕರ ಬಳಿ ಬೇಡಿಕೆ ಇಟ್ಟಿದ್ದ.  ಮೃತ ವ್ಯಕ್ತಿ ಪತ್ನಿ ತನ್ನ ಸಹೋದರರಿಗೆ ವಿಷಯ ತಿಳಿಸಿದ್ದಾರೆ. ಸಂಬಂಧಿಕರು ಇದಕ್ಕೆ ಒಪ್ಪದೆ ಇದ್ದಾಗ ಅಮಾನವೀಯತೆ ಪ್ರದರ್ಶಿಸಿದ ಚಾಲಕ, ಶವವನ್ನು ಪುಟ್ ಪಾತ್ ನಲ್ಲಿ ಇಳಿಸಿ ಪರಾರಿಯಾಗಿದ್ದ.

ಕಳೆದ‌ ಮೇ 24 ರಂದು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಉತ್ತರ ಭಾರತದ ವ್ಯಕ್ತಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವೇಳೆ ಹೆಬ್ಬಾಳದ ಚಿತಾಗಾರಕ್ಕೆ ಶವ ಸಾಗಿಸಲು ಕುಟುಂಬಸ್ಥರ ಬಳಿ ಹಣ ಇರಲಿಲ್ಲ. ‌ಆ್ಯಂಬುಲೆನ್ಸ್​​ನಲ್ಲಿ ಚಿತಾಗಾರಕ್ಕೆ ಶವ ಸಾಗಿಸಲು ಚಾಲಕ 18 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ. ಹಣ ನೀಡದಿದ್ದರಿಂದ ಕೊನೆಗೆ ಶವವನ್ನು ಪುಟ್ ಪಾತ್ ಮೇಲೆ ಇಳಿಸಿ ಆ್ಯಂಬುಲೆನ್ಸ್ ಚಾಲಕ ಎಸ್ಕೇಪ್ ಆಗಿದ್ದ.‌

ಮೃತರ ಸಂಬಂಧಿಕರು ಈ ಬಗ್ಗೆ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು.  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಾಸಗಿ ಆ್ಯಂಬುಲೆನ್ಸ್ ಸೇವೆಯ ಚಾಲಕನನ್ನು ಬಂಧಿಸಿದ್ದಾರೆ.

SCROLL FOR NEXT