ರಾಜ್ಯ

ಕೋವಿಡ್ ಸೋಂಕಿತ ವಕೀಲರಿಗೆ ಕರ್ನಾಟಕ ಬಾರ್ ಕೌನ್ಸಿಲ್ ನಿಂದ 1 ಕೋಟಿ ರೂ. ನೆರವು

Raghavendra Adiga

ಬೆಂಗಳೂರು: ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ (ಕೆಎಸ್‌ಬಿಸಿ) ರಾಜ್ಯದ 733 ಕೋವಿಡ್ ಸೋಂಕಿತ ವಕೀಲರಿಗೆ 1.06 ಕೋಟಿ ರೂ ನೆರವಿಗೆ ಮುಂದಾಗಿದೆ.

ಹೋಂ ಕ್ವಾರಂಟೈನ್ ನಲ್ಲಿರುವ ವಕೀಲರಿಗೆ ತಲಾ 10,000 ರೂ. ಮತ್ತು ಕೋವಿಡ್ -19 ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾದ ವಕೀಲರಿಗೆ ತಲಾ 25 ಸಾವಿರ ರೂ. ನೀಡಲು ಕೌನ್ಸಿಲ್  ತೀರ್ಮಾನಿಸಿದೆ. ಬಾರ್ ಕೌನ್ಸಿಲ್ ಅಧ್ಯಕ್ಷ ಎಲ್ ಶ್ರೀನಿವಾಸ ಬಾಬು ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, 513 ವಕೀಲರಿಗೆ ತಲಾ 10,000 ರೂ. ಮತ್ತು 220 ವಕೀಲರಿಗೆ ತಲಾ 25 ಸಾವಿರ ರೂ. ನೀಡಲಾಗುವುದು.

ಕೌನ್ಸಿಲ್ ಎರಡು ಹಂತಗಳಲ್ಲಿ ಆರ್ಥಿಕ ನೆರವನ್ನು ಮಂಜೂರು ಮಾಡಿದೆ ಎಂದು ಬಾಬು ಹೇಳಿದ್ದಾರೆ. ಮೊದಲ ಹಂತದಲ್ಲಿ  ಕೌನ್ಸಿಲ್ ಒಟ್ಟು 54.15 ಲಕ್ಷ ರೂ., ಗಳನ್ನು 289 ವಕೀಲರಿಗೆ ತಲಾ 10,000 ರೂ ಮತ್ತು 101 ವಕೀಲರಿಗೆ ತಲಾ 25 ಸಾವಿರ ರೂ ಗಳಂತೆ ನೀಡುತ್ತದೆ.,ಎರಡನೇ ಹಂತದಲ್ಲಿ ಒಟ್ಟು 52.15 ಲಕ್ಷ ರೂ., 224 ವಕೀಲರಿಗೆ ತಲಾ 10,000 ರೂ. ಮತ್ತು 119 ವಕೀಲರಿಗೆ ತಲಾ 25 ಸಾವಿರ ರೂ. ನೀಡಲಿದೆ.

25 ಕೋಟಿ ರೂ.ಗಳ ಅನುದಾನಕ್ಕಾಗಿ ಮನವಿ

ಏತನ್ಮಧ್ಯೆ, ಲಾಕ್ ಡೌನ್ ಕಾರಣದಿಂದ ನ್ಯಾಯಾಲಯಗಳ ಕಾರ್ಯನಿರ್ವಹಿಸದ ಕಾರಣ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ 25 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡುವಂತೆ ಕೆಎಸ್‌ಬಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.

ರಾಜ್ಯದಲ್ಲಿ 1.10 ಲಕ್ಷಕ್ಕೂ ಹೆಚ್ಚು ವಕೀಲರು ಇದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶ, ಕೃಷಿ ಸಮುದಾಯ ಮತ್ತು ಹಿಂದುಳಿದ ವರ್ಗದವರು,  ಲಾಕ್‌ಡೌನ್‌ನಿಂದಾಗಿ ಅವರು ಕಳೆದ ಒಂದು ವರ್ಷದಿಂದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. 200 ಕ್ಕೂ ಹೆಚ್ಚು ವಕೀಲರು ಕೋವಿಡ್ -19 ಗೆ ಬಲಿಯಾಗಿದ್ದಾರೆ ಎಂದು ಸಿಎಂ ಅವರಿಗೆ ಬರೆದ ಪತ್ರದಲ್ಲಿ ಬಾಬು ಹೇಳಿದ್ದಾರೆ

ಎರಡನೇ ಅಲೆಯಲ್ಲಿ 200 ಕ್ಕೂ ಹೆಚ್ಚು ವಕೀಲರು ಕೋವಿಡ್‌ಗೆ ಪ್ರಾಣ ಕಳೆದುಕೊಂಡಿದ್ದಾರೆ. ನ್ಯಾಯಾಲಯಗಳು ಭಾಗಶಃ ಕಾರ್ಯನಿರ್ವಹಿಸುತ್ತಿರುವುದರಿಂದ ಪ್ರಾಕ್ಟೀಸ್ ಮಾಡುವ ವಕೀಲರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ, ವಿಶೇಷವಾಗಿ ಮಹಿಳಾ ವಕೀಲರು ಮತ್ತು ಗ್ರಾಮೀಣ ಹಿನ್ನೆಲೆಯ ವಕೀಲರು. ಸಂಕಷ್ಟದಲ್ಲಿದ್ದಾರೆ.  ಆದ್ದರಿಂದ, 25 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ನಾವು ವಿನಂತಿಸುತ್ತೇವೆ" ಎಂದು ಅವರು ಸಿಎಂಗೆ ಮನವಿ ಮಾಡಿದರು,

ಬೆಂಗಳೂರು ವಕೀಲರ ಸಂಘದಿಂದ ಪರಿಹಾರ ಪ್ಯಾಕೇಜ್ ಗಾಗಿ ಸಿಎಂಗೆ ಒತ್ತಾಯ

ಮುಖ್ಯಮಂತ್ರಿಯನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಎಎಬಿ ಅಧ್ಯಕ್ಷ ಎಪಿ ರಂಗನಾಥ್ ಬೆಂಗಳೂರಿನಲ್ಲಿ ಸುಮಾರು 67 ವಕೀಲರು ಮತ್ತು ರಾಜ್ಯದ ಸುಮಾರು 170 ವಕೀಲರು ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅನೇಕ ವಕೀಲರು ತಮ್ಮ ಜೀವನೋಪಾಯವನ್ನೂ ಕಳೆದುಕೊಂಡಿದ್ದಾರೆ ಎಂದಿರುವ ರಂಗನಾಥ್ ವಕೀಲರನ್ನು ಮುಂಚೂಣಿ ಕಾರ್ಯಕರ್ತರಂತೆ ಪರಿಗಣಿಸಬೇಕು ಮತ್ತು ಕೋವಿಡ್‌ಗೆ ಬಲಿಯಾದ ಪ್ರತಿ ಕುಟುಂಬ ವಕೀಲರಿಗೆ 30 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಬೇಕು ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ವಕೀಲರಿಗೆ ಪ್ಯಾಕೇಜ್ ಘೋಷಿಸಬೇಕು ಎಂದು ವಿನಂತಿಸಿದ್ದಾರೆ.

SCROLL FOR NEXT