ರಾಜ್ಯ

ಮೋದಿ ಸರ್ಕಾರಕ್ಕೆ 7 ವರ್ಷ: ರಾಜ್ಯದಾದ್ಯಂತ ಬಿಜೆಪಿ ನಾಯಕರಿಂದ 'ಕೋವಿಡ್ ಸೇವಾ ದಿನ' ಆಚರಣೆ

Manjula VN

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರಕಾರ ಏಳನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ವತಿಯಿಂದ ಭಾನುವಾರ ಸೇವಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೋವಿಡ್ ಪೀಡಿತರು, ಪೌರಕಾರ್ಮಿಕರಿಗೆ ನೆರವು ನೀಡಲಾಯಿತು. 

ಸೇವೆಯೇ ಸಂಘಟನೆ ಹೆಸರಿನಲ್ಲಿ ರಾಜ್ಯಾದ್ಯಂತ ಸಹಸ್ರಾರು ಬೂತ್ ಹಾಗೂ ಗ್ರಾಮ ಮಟ್ಟದಲ್ಲಿ ಸೇವಾ ಚಟುವಟಿಕೆ ನಡೆಸಲಾಯಿತು. ಅಕ್ಕಿ ಕೊಡುವುದು, ಪಡಿತರ ವಿತರಣೆ, ವಿದ್ಯಾರ್ಥಿಗಳ ಶುಲ್ಕ ಪಾವತಿಸುವುದು ಸೇರಿದಂತೆ ರಾಜ್ಯದ್ಯಂತ 25 ಲಕ್ಷ ಕಾರ್ಯಕರ್ತರು ಸೇರಿ ಸೇವಾ ಚಟುವಟಿಕೆಗಳನ್ನು ಸೇವಾ ಹಿ ಸಂಘಟನೆ ಹೆಸರಿನಲ್ಲಿ ಕೈಗೊಳ್ಳಲಾಯಿತು. 

ಸೇವಾ ದಿನ ಕಾರ್ಯಕ್ರಮ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಕೋವಿಡ್ -19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆಚರಣೆಗಳನ್ನು ನಡೆಸದಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಕಾರ್ಯಕರ್ತರು 'ಕೋವಿಡ್ ಸೇವಾ ದಿನ'ವಾಗಿ ಆಚರಣೆ ಮಾಡಿದ್ದಾರೆ. ಜನರಿಗೆ ಆಹಾರ ಕಿಟ್‌ಗಳು, ಔಷಧಿಗಳು, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ, ಸಸಿಗಳನ್ನು ನೆಡುವ ಮೂಲಕ ಆಚರಣೆ ಮಾಡಿದ್ದಾರೆಂದು ಹೇಳಿದ್ದಾರೆ. 

ಕೋವಿಡ್ ಸೇವೆಗೆ ದೇಶದ ಒಟ್ಟು 1 ಲಕ್ಷ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ರಾಜ್ಯದ 10 ಸಾವಿರ ಗ್ರಾಮಗಳಲ್ಲಿ ಸೇವೆ ಸಲ್ಲಿಸಲಾಗುತ್ತದೆ. ಕೋವಿಡ್ ಸೇವೆಗೆ ಕ್ಯಾಂಪ್ ಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಬಿಜೆಪಿ ಕಾರ್ಯಕರ್ತರು ಸೇವೆ ಸಲ್ಲಿಸಲಿದ್ದಾರೆ. ಯುವ ಮೋರ್ಚಾ, ಮಹಿಳಾ ಮೋರ್ಚಾ ಹಾಗೂ ಇತರೆ ಮೋರ್ಚಾಗಳು ಈ ಕ್ಯಾಂಪ್ ಮೂಲಕ ರಕ್ತದಾನವನ್ನು ಮೂರು ದಿನಗಳ ಕಾಲ ನಡೆಸಲಿದೆ. ಕೋವಿಡ್ ಸೇವೆ ಮೂಲಕ ಸಂಭ್ರಮಾಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಕೊರೋನಾ ಕಾರಣದಿಂದಾಗಿ ಅನಾಥರಾದ ಮಕ್ಕಳಿಗೆ ಹಣ ಸಂಗ್ರಹಿಸಿ ಮಕ್ಕಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಹಣದ ಬಡ್ಡಿಯನ್ನು ಮಕ್ಕಳು ಬಳಕೆ ಮಾಡಿಕೊಳ್ಳಬಹುದಾಗಿದೆ. ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಮಗುವಿಗೆ ಪಕ್ಷ ರೂ.25 ಲಕ್ಷ ಹಣವನ್ನು ಸಂಗ್ರಹಿಸಿದೆ ಎಂದಿದ್ದಾರೆ. 

ಈ ನಡುವೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಬಿಡಿಎ ಮುಖ್ಯಸ್ಥ ಎಸ್.ಆರ್.ವಿಶ್ವನಾಥ್ ಅವರು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಲಾದ ಕೋವಿಡ್ ಸೇವಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕೊರೋನಾ ಮುಂಚೂಣಿ ಹೋರಾಟಗಾರರಾದ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹಾಗೂ ಕೊರೋನಾ ವಾರಿಯರ್ಸ್ ಗಳಿಗೆ ಕೋವಿಡ್ ಕಿಟ್ ಗಳನ್ನು ವಿತರಣೆ ಮಾಡಿದರು. 

SCROLL FOR NEXT