ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ಮದ್ಯ ಸಿಗದ್ದಕ್ಕೆ ಕಿರಿಕಿರಿಗೊಂಡು ನಟನನ್ನು ಅಶ್ಲೀಲ ಪದಗಳಿಂದ ಅವಮಾನಿಸಿದ್ದವರ ವಿರುದ್ಧ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂಬುದು ಈ ಆದೇಶದ ಹಿಂದಿನ ಉದ್ದೇಶ ಆಗಿತ್ತು. ಕುಡಿದ ಅಮಲಿನಲ್ಲಿ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಹುದು. ಅದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು.
ಆದರೆ, ಈ ಆದೇಶ ಕೆಲವರಿಗೆ ಕಿರಿಕಿರಿಯುಂಟು ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಿಯರ್ ಬಾಟಲಿ ಫೋಟೋಗಳನ್ನು ಹಾಕಿ ಪುನೀತ್ ರಾಜ್ ಕುಮಾರ್ ಅವರಿಗೆ ಕೆಲವರು ಅಶ್ಲೀಲ ಪದಗಳಿಂದ ನಿಂದಿಸಿ ಅವಮಾನಿಸಿದ್ದರು.
ಇದಕ್ಕೆ ತೀವ್ರವಾಗಿ ಕಿಡಿಕಾರಿರುವ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಅವರು, ಇಂತಹವರಿಗೆ ಮನುಷ್ಯತ್ವ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೇವಲ ಆಲ್ಕೋಹಾಲ್ಗಾಗಿ ಪುನೀತ್ ಬಗ್ಗೆ ಇಂಥ ವರ್ತನೆಯೇ? ಜನರಲ್ಲಿ ಮನುಷ್ಯತ್ವ ಉಳಿದಿಲ್ಲವೇ?’ ಎಂದು ಸಾನ್ವಿ ಛೀಮಾರಿ ಹಾಕಿದ್ದಾರೆ.
‘ಬೆಂಗಳೂರಿನಲ್ಲಿ ಇರುವ ಉತ್ತರ ಭಾರತದ ಸ್ನೇಹಿತರಿಗೆ ಹೇಳೋದೇನೆಂದರೆ, ಕರ್ನಾಟಕ ಸರ್ಕಾರ ಸರಿಯಾದ ಕ್ರಮವನ್ನೇ ಕೈಗೊಂಡಿದೆ. ಇಂತಹ ಸಮಯದಲ್ಲಿ ಮದ್ಯ ಮಾರಾಟ ಒಳ್ಳೆಯದಲ್ಲ. ಸ್ವಲ್ಪವಾದರೂ ಪ್ರಜ್ಞಾವಂತಿಕೆ ತೋರಿಸಿ. ಅಗೌರವ ತೋರುವಂತಹ ಮಾತುಗಳನ್ನು ಆಡಬೇಡಿ’ ಎಂದು ವ್ಯಕ್ತಿಯೊಬ್ಬರು ಮಾಡಿದ ಪೋಸ್ಟ್ ಅನ್ನು ಸಾನ್ವಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.