ರಾಜ್ಯ

ಕನ್ನಡಿಗರು ಕನ್ನಡ ಸಂಸ್ಕೃತಿಯನ್ನು ಇತರರಿಗೆ ಕಲಿಸುವ ಪ್ರತಿಜ್ಞೆ ಮಾಡಬೇಕು: ಸಚಿವ ಬಿ.ಸಿ.ನಾಗೇಶ್

Manjula VN

ಬೆಂಗಳೂರು: ನಮ್ಮ ಸಂಸ್ಕೃತಿ ಪರಂಪರೆಯನ್ನು ಎಲ್ಲ ಕನ್ನಡೇತರರಿಗೂ ಕಲಿಸುವ ಪ್ರತಿಜ್ಞೆ ಕನ್ನಡಿಗರು ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಪ್ರತಿಯೊಬ್ಬ ನಾಗರಿಕನೂ ತಮ್ಮ ದೈನಂದಿನ ವ್ಯವಹಾರಗಳಲ್ಲಿ ಕನ್ನಡದಲ್ಲಿ ಮಾತನಾಡುವ, ಬರೆಯುವ ಮತ್ತು ಓದುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಕನ್ನಡ ಪತ್ರಿಕೆಗಳು, ಪುಸ್ತಕಗಳನ್ನು ಓದುವುದು ಮತ್ತು ಕನ್ನಡ ನಾಟಕಗಳು ಮತ್ತು ಯಕ್ಷಗಾನವನ್ನು ನೋಡುವುದನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದಡಿ ಲಕ್ಷಾಂತರ ನಾಗರಿಕರು ಕನ್ನಡ ಗೀತೆಗಳನ್ನು ಹಾಡಿದ ಬಗ್ಗೆ ಮಾತನಾಡಿದ ನಾಗೇಶ್ ಅವರು, “ರಾಜ್ಯದಾದ್ಯಂತ ಕನ್ನಡ ಭಾಷೆಯ ಪರಿಮಳವನ್ನು ಪಸರಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಮತ್ತು ಇದು ದಿನನಿತ್ಯದ ಆಚರಣೆಯೂ ಆಗಬೇಕು. ನಾವು ಭಾಷೆಯನ್ನು ಉಳಿಸಿ ಬೆಳೆಸಬೇಕು ಮತ್ತು ಇದು ನಿತ್ಯೋತ್ಸವವಾಗಬೇಕು ಎಂದು ತಿಳಿಸಿದ್ದಾರೆ.

 ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಒಂದು ಕೋಟಿಗೂ ಅಧಿಕ ಮಕ್ಕಳು ರಾಜ್ಯದ ವಿವಿಧ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಅವರೆಲ್ಲರಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಪ್ರೀತಿ ಅಭಿಮಾನಗಳು ಬೆಳೆಯುವಂತೆ ಶಿಕ್ಷಕರು ಹಾಗೂ ಪೋಷಕರು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ.

ನಮ್ಮ ಶಾಲಾ ಮಕ್ಕಳು ಕುವೆಂಪು, ಬೇಂದ್ರೆ, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ ಮುಂತಾದ ಸಾಹಿತಿಗಳ ಕೃತಿಗಳನ್ನು ಅಭ್ಯಾಸ ಮಾಡಿ ಈ ನಾಡಿನ ಪರಂಪರೆಯನ್ನು ನೆಲದ ಸಂಸ್ಕೃತಿ ಅರಿವನ್ನು ಪಡೆಯಲೆಂದು ಆಶಿಸುತ್ತೇನೆ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಲು ಮನವಿ ಮಾಡುತ್ತೇನೆ. 2021-22ನೇ ಸಾಲಿನಲ್ಲಿ ರಾಜ್ಯದ 8 ಜ್ಞಾನಪೀಠ ಪುರಸ್ಕೃತರು ಅಭ್ಯಸಿಸಿದ ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರೂ.16.88 ಕೋಟಿ ಅನುದಾನ ಒದಗಿಸಿದ್ದು, ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದು ಶಿಕ್ಷಣ ಸಚಿವರು ಪ್ರಸ್ತಾಪಿಸಿದರು.

ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದು ನಮ್ಮೆಲ್ಲರ ಆದ್ಯತೆಯಾಗಿದೆ. ರಾಜ್ಯದ ಒಟ್ಟು 20,718 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 14,236 ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. ಅದೇ ರೀತಿ ಒಟ್ಟು 22,501 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 2421 ಶಾಲೆಗಳಲ್ಲಿ 35 ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸ್ಸಿನಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ ಶಾಲಾ ಸಂಕೀರ್ಣಗಳನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

SCROLL FOR NEXT