ಡಾ ರಮಣ್ ರಾವ್, ಪುನೀತ್ ರಾಜ್ ಕುಮಾರ್ 
ರಾಜ್ಯ

ನನ್ನ ಮಗನಿಗೆ ಈ ಸಮಸ್ಯೆ ಎದುರಾಗಿದ್ದರೆ ಏನು ಮಾಡುತ್ತಿದ್ದೆನೋ ಅದನ್ನೇ ನಾನು ಅಪ್ಪುಗೆ ಮಾಡಿದ್ದೇನೆ: ಡಾ. ರಮಣ್ ರಾವ್

ಪುನೀತ್ ರಾಜ್ ಕುಮಾರ್ ಅವರು ಕಳೆದ ಶುಕ್ರವಾರ ಹೃದಯಾಘಾತದಿಂದ ಹಠಾತ್ ನಿಧನರಾದ ಬಳಿಕ ಅವರ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿರುವ ಡಾ ರಮಣ ರಾವ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದಾರೆ. 

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರು ಕಳೆದ ಶುಕ್ರವಾರ ಹೃದಯಾಘಾತದಿಂದ ಹಠಾತ್ ನಿಧನರಾದ ಬಳಿಕ ಅವರ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿರುವ ಡಾ ರಮಣ ರಾವ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದಾರೆ. 

ಈ ನಿಟ್ಟಿನಲ್ಲಿ ಸದಾಶಿವನಗರದಲ್ಲಿರುವ ಡಾ ರಮಣ್ ರಾವ್ ನಿವಾಸಕ್ಕೆ ತೀವ್ರ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಡಾ ರಮಣ್ ರಾವ್ ಅವರ ನಿವಾಸದ ಮುಂದೆ ಅವರ ಕ್ಲಿನಿಕ್ ಇದ್ದು ನಿನ್ನೆಯಿಂದ ಅವರ ನಿವಾಸ ಮತ್ತು ಕ್ಲಿನಿಕ್ ಗೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಭಂಗವಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿದ್ದಾರೆ.

ಇನ್ನು ಪುನೀತ್ ಸಾವಿನ ಬಗ್ಗೆ ತನಿಖೆಯಾಗಬೇಕು, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿರುವ ಡಾ ರಮಣ್ ರಾವ್ ನಿರ್ಲಕ್ಷ್ಯ ತೋರಿಸಿದ್ದಾರೆ, ಸಮಯಕ್ಕೆ ಸರಿಯಾಗಿ ನೀಡಬೇಕಾದ ಚಿಕಿತ್ಸೆಯನ್ನು ಪ್ರಾಥಮಿಕವಾಗಿ ವೈದ್ಯರು ನೀಡಲಿಲ್ಲ ಅವರ ವಿರುದ್ಧ ತನಿಖೆ ನಡೆಸಬೇಕು ಎಂಬ ಮಾತುಗಳು, ಒತ್ತಾಯಗಳು ಕೇಳಿಬರುತ್ತಿವೆ.

ಈ ಬಗ್ಗೆ ಮಾಧ್ಯಮಗಳಿಗೆ ಸ್ವತಃ ಡಾ ರಮಣ ರಾವ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಪುನೀತ್ ಅವರು ನಮ್ಮ ಕ್ಲಿನಿಕ್ ಗೆ ಬೆಳಗ್ಗೆ 11.15ರಿಂದ 11.20ರ ಹೊತ್ತಿಗೆ ಬಂದರು, ನಡೆದುಕೊಂಡೇ ಬಂದರು, ಬಂದು ಕೇವಲ ಒಂದು ನಿಮಿಷ ಹೊರಗೆ ಕುಳಿತಿದ್ದರಷ್ಟೆ ಆಗ ನಮ್ಮ ಸಹಾಯಕರು ಪುನೀತ್ ಅವರು ಬಂದಿದ್ದಾರೆ ಎಂದು ಹೇಳಿದರು. ಅವರಿಗೆ ಆಗ ನೋವಾಗಲಿ, ಸುಸ್ತು, ಬಳಲಿಕೆ ಇರಲಿಲ್ಲ. ಆಗ ಸಮಾಲೋಚನೆಗೆ ಬಂದಿದ್ದ ಇನ್ನೊಬ್ಬ ರೋಗಿಯನ್ನು ಹೊರಗೆ ಕಳುಹಿಸಿ ಅಪ್ಪು ಅವರನ್ನು ಪರೀಕ್ಷೆ ಮಾಡಲು ನನ್ನ ಕೋಣೆಯೊಳಗೆ ಕರೆಸಿಕೊಂಡೆ. ಒಟ್ಟಾರೆ 4ರಿಂದ 5 ನಿಮಿಷಯದಲ್ಲಿ ಪರೀಕ್ಷೆ ಮುಗಿಸಿದ್ದೆ, ಆಗ ಶ್ವಾಸಕೋಶ, ಹೃದಯಬಡಿತ ಎಲ್ಲವೂ ಸಹಜವಾಗಿತ್ತು. ಆದರೆ ವಿಪರೀತ ಬೆವರುತ್ತಿದ್ದರು. 

ಯಾಕೆ ಇಷ್ಟು ಬೆವರುತ್ತಿದ್ದೀರಿ ಅಪ್ಪು ಎಂದು ಕೇಳಿದಾಗ, ನಾನು ಈಗ ತಾನೇ ಜಿಮ್ ಲ್ಲಿ ವ್ಯಾಯಾಮ ಮಾಡಿ ಬಂದಿದ್ದೇನೆ, ಈ ಬೆವರು ನನಗೆ ನಾರ್ಮಲ್ ಎಂದರು. ಆಗ ನಾನು ಇಲ್ಲ ಇಸಿಜಿ ಮಾಡಬೇಕು ಎಂದೆ, ತಕ್ಷಣ ಮಾಡೋಣ ಎಂದು ಪಕ್ಕದ ರೂಮಿಗೆ ಕರೆದುಕೊಂಡು ಹೋಗಿ ಶರ್ಟ್ ತೆಗೆದು ಜೆಲ್ ಹಾಕಿ ಇಸಿಜಿ ಮಾಡಲು ಒಂದು-ಒಂದೂವರೆ ನಿಮಿಷ ಆಯಿತು.ಇಸಿಜಿ ವರದಿ ಬರಲು ಮತ್ತೆ ಒಂದು 30 ಸೆಕೆಂಡ್, ಬಹುಶಃ ಎರಡು-ಎರಡೂವರೆ ನಿಮಿಷದಲ್ಲಿ ಅದು ಕೂಡ ಆಯಿತು. ಇಸಿಜಿಯಲ್ಲಿ ಹೃದಯಕ್ಕೆ ತೀವ್ರ ಒತ್ತಡವಾಗಿದ್ದಂತೆ ಕಂಡುಬಂತು. ಆಗ ಅವರ ಪತ್ನಿ ಅಶ್ವಿನಿಯವರಲ್ಲಿ ಅಪ್ಪು ಅವರ ಹೃದಯಕ್ಕೆ ತೀವ್ರ ಒತ್ತಡ ಬಿದ್ದಂತೆ ಕಂಡುಬರುತ್ತಿದೆ, ಅವರನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕು, ಹೆಚ್ಚಿನ ಹೃದಯ ತಪಾಸಣೆಯ ಅಗತ್ಯವಿದೆ ಎಂದು ಹೇಳಿದೆ.

ಆಗ ಅಶ್ವಿನಿಯವರು ಫೋನ್ ಮಾಡಲು ಹೊರಗೆ ಹೋದರು. ಆಗ ಅಪ್ಪು ಅವರು ತಲೆ ಸುತ್ತು ಬರುತ್ತಿದೆ ಎಂದರು. ಆಗ ನಾನು ಕುಳ್ಳಿರಿಸಿ ತಲೆ ಕೆಳಗಡೆ ಇಡು, ನಿಂತುಕೊಳ್ಳಬೇಡ, ನಡೆಯುವುದು ಬೇಡ, ಈಗಾಗಲೇ ಸುಸ್ತು ಇದೆ ಎಂದು ನಾವು ಕರೆದುಕೊಂಡು ಹೋಗುತ್ತೇವೆ ಎಂದೆ. ಮೂವರ ಸಹಾಯ ತೆಗೆದುಕೊಂಡು ಕಾರಿನ ಬಳಿ ಎತ್ತಿಕೊಂಡು ಹೋಗಿ ಮಲಗಿಸಿದೆವು. ಆಗ ಅಪ್ಪು ಅವರು ಪ್ರತಿಕ್ರಿಯಿಸುತ್ತಿದ್ದರು. ಅವರು ಉಸಿರಾಡುತ್ತಿದ್ದರು, ಪಲ್ಸ್ ಕೂಡ ಸಹಜವಾಗಿತ್ತು. ನಮ್ಮ ವೈದ್ಯಕೀಯ ಶಿಷ್ಠಾಚಾರ ಪ್ರಕಾರ ಅವರಿಗೆ ನೀಡಬೇಕಾಗಿದ್ದ ಚಿಕಿತ್ಸೆಯನ್ನು ನೀಡಿದ್ದೆ. 

ಇಲ್ಲಿಂದ ವಿಕ್ರಂ ಆಸ್ಪತ್ರೆಗೆ ಹೊರಟರು. ನಮ್ಮದು ಬರೀ ಕ್ಲಿನಿಕ್ ಅಷ್ಟೆ, ಸಮಾಲೋಚನೆ ಕೊಠಡಿಯಷ್ಟೆ, ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ.ಹೃದಯದಲ್ಲಿ ಏನಾದರೂ ಸಮಸ್ಯೆಯಿದ್ದರೆ ಬಾಯಲ್ಲಿಟ್ಟುಕೊಳ್ಳಲು ಮಾತ್ರೆ ಕೊಟ್ಟಿದೆ. ನಂತರವೇ ಕಳುಹಿಸಿಕೊಟ್ಟಿದ್ದು, ಇನ್ನು ಸಿಪಿಆರ್ ಟೆಸ್ಟ್ ಮಾಡಿಸಬಹುದಿತ್ತು ಎಂದು ಹೇಳಲು ಅಪ್ಪು ಅವರು ಸಹಜವಾಗಿ ಉಸಿರಾಡುತ್ತಿದ್ದರು, ಅವರ ಹೃದಯ ಬಡಿತವೂ ಇಲ್ಲಿದ್ದಾಗ ಸಹಜವಾಗಿತ್ತು. ಸಿಪಿಆರ್ ಸಹಜ ರೋಗಿಗಳಿಗೆ ಮಾಡುವುದಿಲ್ಲ, ಅದು ಉಸಿರಾಟ ಮತ್ತು ಪಲ್ಸ್ ರೇಟ್ ಸಮಸ್ಯೆಯಿದ್ದವರಿಗೆ ಮಾತ್ರ ಮಾಡುವುದು ಎಂದು ಡಾ ರಮಣ್ ರಾವ್ ಹೇಳಿದರು.

ಅಪ್ಪು ಅವರು ಇಲ್ಲಿಗೆ ಬಂದಿದ್ದಾಗಲೇ ಹೃದಯ ಸಮಸ್ಯೆ ಇದ್ದ ಸಾಕಷ್ಟು ರೋಗಿಗಳು ಇಲ್ಲಿದ್ದರು, ಒಳಗಡೆ ಇದ್ದ ರೋಗಿಯನ್ನು ಅಪ್ಪು ಬಂದಿದ್ದಾರೆ ಎಂದು ಮನವಿ ಮಾಡಿ ಹೊರಗೆ ಕಳುಹಿಸಿ ಅವರನ್ನೇ ತಕ್ಷಣ ಪರೀಕ್ಷೆ ಮಾಡಿದ್ದೆ. ಇಲ್ಲಿ ಬೇರೆ ರೋಗಿಗಳನ್ನು ಪರೀಕ್ಷೆ ಮಾಡಬೇಕಾಗಿದ್ದರಿಂದ ಅವರ ಜೊತೆ ವಿಕ್ರಂ ಹಾಸ್ಪಿಟಲ್ ಗೆ ಹೋಗಿರಲಿಲ್ಲ ಎಂದರು.

ಇನ್ನು ಆಂಬ್ಯುಲೆನ್ಸ್ ಗೆ ಫೋನ್ ಮಾಡಿ ಅದು ಬಂದು ಕರೆದುಕೊಂಡು ಹೋಗುವಷ್ಟು ಹೊತ್ತಿಗೇ ಕನಿಷ್ಠವೆಂದರೂ 10-15 ನಿಮಿಷವಾಗುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಆಸ್ಪತ್ರೆಗೆ ತಲುಪಿಸುವುದು ಅಂದು ನನ್ನ ಜವಾಬ್ದಾರಿಯಾಗಿತ್ತು, ನನ್ನ ಮಗನಿಗೆ ಈ ಪರಿಸ್ಥಿತಿ ಎದುರಾಗಿದ್ದರೆ ಏನು ಮಾಡುತ್ತಿದ್ದೆನೋ ಅದನ್ನೇ ನಾನು ಪುನೀತ್ ಅವರಿಗೂ ಮಾಡಿದ್ದೇನೆ, ನನ್ನ ಕಡೆಯಿಂದ ಯಾವುದೇ ವ್ಯತ್ಯಯವಾಗಿಲ್ಲ ಎಂದರು.

ಸೆಲೆಬ್ರಿಟಿಯಾಗಿದ್ದರೆ ಪ್ರತಿಯೊಂದು ವಿಚಾರವೂ ಜನರಿಗೆ ಗೊತ್ತಾಗುವುದಿಲ್ಲ. ಅವರ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಹೊರಗೆ ಜನಕ್ಕೆ ಏನೇನು ಹೇಳಬೇಕು ಅದನ್ನೇ ಬಹಿರಂಗಪಡಿಸುತ್ತೇವಷ್ಟೆ. ಅದಕ್ಕಿಂತ ಹೆಚ್ಚು ಹೇಳಲು ಸಾಧ್ಯವಿಲ್ಲ, ಅಪ್ಪು ಅವರಿಗೆ ಆ ಪರಿಸ್ಥಿತಿಯಲ್ಲಿ ಮಾನವೀಯ ನೆಲೆಯಲ್ಲಿ ಏನೇನು ಮಾಡಲು ಸಾಧ್ಯವಿದೆಯೋ ಅದನ್ನು ಚಾಚೂ ತಪ್ಪದೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT