ರಾಜ್ಯ

ಕರ್ನಾಟಕ ಪಂಚಾಯತ್ ವ್ಯವಸ್ಥೆ ಇತರೆ ರಾಜ್ಯಗಳಿಗೆ ಮಾದರಿ: ಕೇಂದ್ರ ಸಚಿವ ಕಪಿಲ್ ಪಾಟೀಲ್

Manjula VN

ಬೆಂಗಳೂರು: ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವ ಕಪಿಲ್ ಮೊರೇಶ್ವರ ಪಾಟೀಲ್ ಅವರು ಮಂಗಳವಾರ ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕೊಂಡಾಡಿದ್ದಾರೆ.

ನಿನ್ನೆಯಷ್ಟೇ ಕಪಿಲ್ ಮೊರೇಶ್ವರ ಪಾಟೀಲ್ ಅವರು, ದೊಡ್ಡಜಾಲ ಮತ್ತು ರಾಜಾನುಕುಂಟೆ ಪಂಚಾಯತಿಗಳಿಗೆ ಭೇಟಿ ನೀಡಿದ್ದು, ಈ ವೇಳೆ ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಜನೆಗೆ ಹಾಗೂ ಗ್ರಾಮೀಣ ಆರ್ಥಿಕತೆಗೆ ಮಹತ್ವ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಗಳನ್ನು ಆರ್ಥಿಕವಾಗಿಯೂ ಅಭಿವೃದ್ಧಿ ಮಾಡಬೇಕಿದೆ. ರಾಜನಕುಂಟೆ ಹಾಗೂ ದೊಡ್ಡ ಜಾಲ ಗ್ರಾಮ ಪಂಚಾಯತ್ ವೀಕ್ಷಣೆ ಮಾಡಿದ್ದೇನೆ. ಅಲ್ಲಿ ನಮ್ಮ ಯೋಜನೆಗಳು ಜಾರಿಯಾಗಿವೆ. ಅಮೃತ್ ಯೋಜನೆ ಉತ್ತಮವಾಗಿ ಅನುಷ್ಠಾನಗೊಂಡಿದೆ. ನಮ್ಮ ಯೋಜನೆಗಳು ಗ್ರಾಮಗಳಿಗೆ ತಲುಪಿವೆ. ಕರ್ನಾಟಕ ಉತ್ತಮ ಸಾಧನೆ ಮಾಡಿದೆ.

ಗ್ರಾಮೀಣ ವಿಕಾಸದಲ್ಲಿ ಉತ್ತಮ ಕೆಲಸ ಮಾಡ್ತಿದೆ. ಗ್ರಾಮೀಣ ವಿಕಾಸ ಅಭಿವೃದ್ಧಿಗೆ ಪೂರಕವಾದುದು ಪ್ರಧಾನಿಯವರ ಗುರಿಯೂ ಇದೇ ಆಗಿದೆ. ಗ್ರಾಮೀಣ ವಿಕಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತೆ. ಹಾಗಾಗಿ ನಮ್ಮ ಗುರಿ ಗ್ರಾಮಗಳ ವಿಕಾಸ. ಗ್ರಾಮಗಳ ಸ್ವಚ್ಚತೆ ದೇಶದ ಅಭಿವೃದ್ಧಿಗೆ ಪೂರಕ.

ಸಾಲಿಡ್ ವೇಸ್ಟ್ ಮೇನೇಜ್ ಮೆಂಟ್ ಚೆನ್ನಾಗಿದೆ. ಇಲ್ಲಿ ಚೆನ್ನಾಗಿ ಅನುಷ್ಟಾನ ಮಾಡಲಾಗುತ್ತಿದೆ. ಈಶ್ವರಪ್ಪ ಕೂಡ ಇಲಾಖೆಗೆ ನ್ಯಾಯ ಒದಗಿಸುತ್ತಿದ್ದಾರೆ. ಗ್ರಾಮೀಣ ಇಲಾಖೆ ಯೋಜನೆಗಳು ಜನರಿಗೆ ತಲುಪಿವೆ. ಕಾಶ್ಮೀರದಲ್ಲೂ ಗ್ರಾಮಗಳ ಅಭಿವೃದ್ಧಿಯಾಗುತ್ತಿದೆ. ಉತ್ತಮವಾಗಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಗ್ರಾಮೀಣಾಭಿವೃದ್ಧಿಯಲ್ಲಿ ಕರ್ನಾಟಕ ನಂಬರ್ ಒನ್ ಆಗಲಿದೆ. ಆ ವಿಶ್ವಾಸ ನಮಗಿದೆ ಎಂದು ಕರ್ನಾಟಕದ ಗುಣಗಾನ ಮಾಡಿದ್ದಾರೆ.

ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ತಾವು ಭೇಟಿ ನೀಡುತ್ತಿರುವ ಏಳನೇ ರಾಜ್ಯ ಕರ್ನಾಟಕವಾಗಿದೆ. ಪಂಚಾಯತಿಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ 2.5 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ಅದರಲ್ಲಿ ಕರ್ನಾಟಕಕ್ಕೆ 11,000 ಕೋಟಿ ರೂ. ನೀಡಲಾಗಿದೆ. ಅಲ್ಲದೆ, 15ನೇ ಹಣಕಾಸು ಆಯೋಗದ ಅಡಿಯಲ್ಲಿ ರಾಜ್ಯಕ್ಕೆ ರೂ.3,500 ಕೋಟಿ ನೀಡಲಾಗುತ್ತಿದೆ. ಅಗತ್ಯವಿದ್ದರೆ, ಕರ್ನಾಟಕಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದು ವಿವರಿಸಿದರು.

ಭಾರತವನ್ನು ಬಯಲು ಶೌಚ ಮುಕ್ತ ದೇಶವನ್ನಾಗಿ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದು, ಈ ನಿಟ್ಟಿನಲ್ಲಿ "ಕರ್ನಾಟಕವು ಅಡೆತಡೆಗಳ ನಡುವೆಯೂ ಶೇ.80 ಗುರಿಯನ್ನು ಸಾಧಿಸಿದೆ ಮತ್ತು ಮುಂಬರುವ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.

SCROLL FOR NEXT