ರಾಜ್ಯ

ಪುನೀತ್ ರಾಜ್ ಕುಮಾರ್ ಕಣ್ಣುಗಳಿಂದ ಇನ್ನೂ ಹತ್ತು ಜನಕ್ಕೆ ದೃಷ್ಟಿಭಾಗ್ಯ: ವಿನೂತನ ಪ್ರಯತ್ನದಲ್ಲಿ ನಾರಾಯಣ ನೇತ್ರಾಲಯ 

Sumana Upadhyaya

ಬೆಂಗಳೂರು: ಕಳೆದ ತಿಂಗಳು ಅಕ್ಟೋಬರ್ 29ರಂದು ಹಠಾತ್ ನಿಧನರಾದ ಸ್ಯಾಂಡಲ್ ವುಡ್ ಪವರ್ ಸ್ಟಾರ್, ಎಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್​ಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿತ್ತು.

ನಾರಾಯಣ ನೇತ್ರಾಲಯದ ವೈದ್ಯರ ತಂಡ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪುನೀತ್ ಅವರ ಎರಡು ಕಣ್ಣುಗಳನ್ನು ಭಾಗಗಳನ್ನಾಗಿ ಮಾಡಿ ನಾಲ್ವರಿಗೆ ದೃಷ್ಟಿಯನ್ನು ನೀಡಿತ್ತು. ಇದೀಗ ನಾರಾಯಣ ನೇತ್ರಾಲಯವು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಪುನೀತ್ ರಾಜ್ ಕುಮಾರ್ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ಮುಂದಾಗಿದೆ.

ಪುನೀತ್(Puneet Rajkumar) ಅವರ ಕಣ್ಣುಗಳು ಆರೋಗ್ಯವಾಗಿರುವುದರಿಂದ ಸ್ಟೆಮ್ ಸೆಲ್ಸ್ ಗಳನ್ನು ಬಳಸಿ ಅಂಧರಿಗೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯವು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದು, ಯಶಸ್ವಿಯಾದರೆ ‌10 ದಿನದಲ್ಲಿ 10 ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ಬರಲಿದೆ. ಸ್ಟೆಮ್ ಸೆಲ್ ಗಳಿಂದ ಸ್ಟೇಮ್ ಸೆಲ್ ಥೆರಫಿ ನಡೆಸಿದರೆ ಮತ್ತೆ ದೃಷ್ಟಿ ಬರಲಿದ್ದು, ಇದು ವಿನೂತನ ಪ್ರಯತ್ನವಾಗುತ್ತದೆ ಎಂದು ನಾರಾಯಣ ನೇತ್ರಾಲಯದ ಡಾ ಭುಜಂಗ ಶೆಟ್ಟಿ ತಿಳಿಸಿದ್ದಾರೆ.

ಪ್ರಕ್ರಿಯೆ ಹೇಗೆ?: ಪುನೀತ್ ಅವರ ಕಣ್ಣಿನ ಸ್ಟೆಮ್ ಸೆಲ್ಗಳನ್ನು ಸಂಗ್ರಹಿಸಿಟ್ಟು ಅವನ್ನು ಲ್ಯಾಬೊರೇಟರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸ್ಟೆಮ್ ಸೆಲ್​ಗಳು ಅಭಿವೃದ್ಧಿ ಹೊಂದಿದ ಬಳಿಕ, ಸ್ಟೆಮ್ ಸೆಲ್‌ನಿಂದ ದೃಷ್ಟಿ ಕಳೆದುಕೊಂಡಿದ್ದ ಅಂಧರಿಗೆ ಕಸಿ ಮಾಡಬಹುದಾಗಿದೆ. ಸ್ಟೆಮ್ ಸೆಲ್ ಥೆರಪಿಯಿಂದ ಪಟಾಕಿ ಸಿಡಿತ ಅಥವಾ ಇತರ ಏಟುಗಳಿಂದ ಕಣ್ಣುಗಳಿಗೆ ಹಾನಿಯಾಗಿದ್ದರೆ ಅಥವಾ ವಂಶವಾಹಿನಿಯಿಂದಾಗಿ ಹಲವು ಜನರಿಗೆ ಅಂಧತ್ವ ಸಮಸ್ಯೆ ಇರುವವರಿಗೆ ಇದರಿಂದ ಸಹಾಯವಾಗುತ್ತದೆ. 

ಪುನೀತ್ ರಾಜ್ ಕುಮಾರ್ ಅವರ ಕಾರ್ನಿಯಾದಿಂದ ಈಗಾಗಲೇ ನಾಲ್ಕು ಜನರಿಗೆ ದೃಷ್ಟಿ ನೀಡಲಾಗಿದೆ. ಈಗ ಅವರ ಸ್ಟೆಮ್ ಸೆಲ್​ಗಳಿಂದ 5 ರಿಂದ 10 ಜನರಿಗೆ ದೃಷ್ಟಿ ನೀಡಬಹುದು. ಪುನೀತ್ ಕಣ್ಣಿನ ಸ್ಟೆಮ್ ಸೆಲ್​ಗಳನ್ನ ಲ್ಯಾಬೊರೇಟರಿಗಳಲ್ಲಿ ಇಡಲಾಗಿದ್ದು, ವೃದ್ದಿ ಮಾಡಲಾಗುತ್ತಿದೆ. ಕಣ್ಣಿನ ಬಿಳಿ ಗುಡ್ಡೆಯಿಂದ ಈ ಸ್ಟೆಮ್ ಸೆಲ್​ಗಳನ್ನ ಸಂಗ್ರಹ ಮಾಡಲಾಗಿದೆ. ಬಿಳಿ ಗುಡ್ಡೆ ಸಮಸ್ಯೆ ಇರುವವರಿಗೆ, ಆ್ಯಸಿಡ್ ಬಿದ್ದು ಹಾನಿಯಾಗಿರುವವರಿಗೆ, ಕಣ್ಣಿಗೆ ಹಾನಿಯಾಗಿರುವವರಿಗೆ, ಪಟಾಕಿ ಅಥವಾ ಇತರ ರಾಸಾಯನಿಕಗಳಿಂದ ಕಣ್ಣಿಗೆ ಹಾನಿಯಾದವರಿಗೆ ಈ ಸ್ಟೆಮ್ ಸೆಲ್ ಗಳನ್ನು ಅಳವಡಿಸಬಹುದು.

ಬಿಳಿ ಗುಡ್ಡೆ ಮಧ್ಯೆ ಸ್ಟೆಮ್ ಸೆಲ್ಸ್ ಇರುತ್ತದೆ. ಈ ಸ್ಟೆಮ್ ಸೆಲ್ಸ್ ಕಣ್ಣನ್ನು ಸ್ವಚ್ಛವಾಗಿಡಲು ಕೆಲಸ ಮಾಡುತ್ತದೆ. ಸ್ಟೆಮ್ ಸೆಲ್ಸ್ ಡ್ಯಾಮೇಜ್ ಆದರೆ ಕಪ್ಪು ಗುಡ್ಡೆಗೆ ಸಮಸ್ಯೆ ಆಗುತ್ತದೆ. ಅಂದರೆ ದೃಷ್ಟಿಯಲ್ಲಿ ಏರುಪೇರಾಗುತ್ತದೆ. ಹೀಗೆ ಸ್ಟೆಮ್ ಸೆಲ್ಸ್ ಡ್ಯಾಮೇಜ್ ಆಗಿರುವ ಜನರಿಗೆ ಈಗ ನಾವು ಇದನ್ನು ಅಳವಡಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಆಸ್ಪತ್ರೆಯ ಮತ್ತೊಬ್ಬ ವೈದ್ಯ ಡಾ.ಯತೀಶ್ ತಿಳಿಸಿದ್ದಾರೆ.

SCROLL FOR NEXT