ರಾಜ್ಯ

ಕೊಡಗಿನಲ್ಲಿ ನೈತಿಕ ಪೊಲೀಸ್ ಗಿರಿಯ 2 ಪ್ರಕರಣಗಳು ವರದಿ: ಎಫ್ಐಆರ್ ದಾಖಲು

Srinivas Rao BV

ಕೊಡಗು: ಕೊಡಗಿನಲ್ಲಿ ನೈತಿಕ ಪೊಲೀಸ್ ಗಿರಿಯ 2 ಪ್ರಕರಣಗಳು ವರದಿಯಾಗಿದ್ದು, ಸೋಮವಾರಪೇಟೆ ತಾಲ್ಲೂಕಿನ ಮಾದಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. 

ಎರಡು ಪ್ರತ್ಯೇಕ ಪ್ರಕರಣಗಳು ಇದಾಗಿದ್ದು, ತನಿಖೆ ಪ್ರಗತಿಯಲ್ಲಿದ್ದು ಈ ವರೆಗೂ ಯಾರನ್ನೂ ಬಂಧಿಸಲಾಗಿಲ್ಲ. 

ಸೋಮವಾರ ಬೆಳಿಗ್ಗೆ ಗರಗಂದೂರು ನಿವಾಸಿ ರಶೀದ್ (23), "ನಾನು ಸ್ನೇಹಿತರೊಂದಿಗೆ ಮಾದಪುರದಲ್ಲಿರುವ ತನ್ನ ನಿವಾಸಕ್ಕೆ ವಾಪಸ್ಸಾಗುತ್ತಿದ್ದಾಗ ತನ್ನ ಸ್ಕೂಟರ್ ನ್ನು ಮಾರ್ಗಮಧ್ಯದಲ್ಲೇ 15 ಯುವಕರ ಗುಂಪು ತಡೆದು ನಿಲ್ಲಿಸಿತು. ಅದು ಬೆಳಿಗ್ಗೆ 9 ರ ಸಮಯ. ಹಲವು ದ್ವಿಚಕ್ರ ವಾಹನಗಳು, ಪಿಕ್ ಅಪ್ ವಾಹನ ಹಾಗೂ ಕಾರು ನಮಗೆ ಎದುರಾಗಿ ನಿಂತಿತ್ತು. ಅವರೆಲ್ಲರೂ ಹಿಂದೂ ಸಂಘಟನೆಯ ಯುವಕರಾಗಿದ್ದು, ನಾನು ಹಿಂದೂ ಸಮುದಾಯದ ಯುವತಿಯೊಂದಿಗೆ ಮಾತನಾಡಿದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೇ ಕಲ್ಲು ತೂರಾಟ ನಡೆಸಿದರು. ನಾನು ಆ ಹುಡುಗಿಯನ್ನು ಕರೆಸಿ ಆಕೆಯೊಂದಿಗೆ ಮಾತನಾಡಿದ್ದೇನಾ? ಎಂದು ಕೇಳುವಂತೆ ಹೇಳಿದೆ. ಆದರೆ ಅವರ್ಯಾರೂ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ, ನನ್ನ ಮೇಲೆ 15 ಮಂದಿ ಹಲ್ಲೆ ನಡೆಸಿದರು" ಎಂದು ಆರೋಪಿಸಿದ್ದಾರೆ. 

ಗಾಯಾಳು ರಶೀದ್ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ದಾಳಿಯ ಸಂದರ್ಭದಲ್ಲಿ ತನ್ನ ಬಳಿ ಇದ್ದ 35,000 ನಗದು ನಾಪತ್ತೆಯಾಗಿದೆ. ತನ್ನ ತಲೆಗೆ ಗಾಯಗಳಾಗಿವೆ ಎಂದು ರಶೀದ್ ಹೇಳಿದ್ದಾರೆ. 

ಮತ್ತೊಂದು ಪ್ರಕರಣದಲ್ಲಿ ಹಸಿರು ಬಣ್ಣದ ಮಾಸ್ಕ್ ಧರಿಸಿದ್ದ ಎಂಬ ಕಾರಣಕ್ಕಾಗಿ ಶಂಸುದ್ದೀನ್ (18) ಮೇಲೆ ಇದೇ ತಂಡದ ಯುವಕರು ದಾಳಿ ನಡೆಸಿದ್ದಾರೆ. "ನಾನು ಆ ರೀತಿಯ ಮಾಸ್ಕ್ ಧರಿಸಿರಲಿಲ್ಲ. ಬೇರೊಬ್ಬ ಧರಿಸಿದ್ದ. ಆದರೆ ಈ ಯುವಕರು ನನ್ನ ಮೇಲೆ ದಾಳಿ ನಡೆಸಿದ್ದರು ಎಂದು ಶಂಸುದ್ದೀನ್ ಹೇಳಿದ್ದಾರೆ.  ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. 

SCROLL FOR NEXT