ರಾಜ್ಯ

ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಐಟಿ ವಲಯದಲ್ಲಿ 60 ಲಕ್ಷದಷ್ಟು ಉದ್ಯೋಗ ಸೃಷ್ಟಿ: ಐಟಿ-ಬಿಟಿ ಸಚಿವ ಡಾ. ಅಶ್ವಥ್ ನಾರಾಯಣ

Sumana Upadhyaya

ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ ರಾಜ್ಯ ಸರ್ಕಾರ ಐಟಿ ರಫ್ತಿನಲ್ಲಿ 150 ಬಿಲಿಯನ್ ಡಾಲರ್ ಆದಾಯ ಗಳಿಕೆಯ ಗುರಿಯನ್ನು ಹೊಂದಿದ್ದು ರಾಜ್ಯಾದ್ಯಂತ ಇದಕ್ಕೆ ಮಾರುಕಟ್ಟೆಯನ್ನು ಸೆಳೆಯಲು ಬೆಂಗಳೂರಿನಿಂದಾಚೆಗೆ ಐಟಿ ವಲಯವನ್ನು ಕೊಂಡೊಯ್ಯುವ ಯೋಜನೆಯನ್ನು ಕೂಡ ಹೊಂದಿದೆ ಎಂದು ಐಟಿ ಬಿಟಿ ಖಾತೆ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ನಿನ್ನೆ ಆಗಮಿಸಿದ್ದ ಅವರು ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಸ್ತುತ, ಬೆಂಗಳೂರು ಆಚೆಗೆ ಐಟಿ ಆದಾಯದ ರಫ್ತಿನಲ್ಲಿ ಶೇಕಡಾ 2 ರಷ್ಟು ಕೊಡುಗೆಯನ್ನು ನೀಡುತ್ತಿದೆ. ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಆದಾಯ ಬರುತ್ತಿದೆ. ಇದು ಮುಂದಿನ ಐದು ವರ್ಷಗಳಲ್ಲಿ ಶೇಕಡಾ 5 ರಷ್ಟು ಅಂದರೆ 50 ಸಾವಿರ ಕೋಟಿ ರೂಪಾಯಿಗಳನ್ನು ತಲುಪಬೇಕೆಂದು ನಾವು ಬಯಸುತ್ತೇವೆ. ಇದು ಈಗಿನ ಬೆಳವಣಿಗೆಗಿಂತ ಐದು ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದರು.

ಬೆಂಗಳೂರಿನಿಂದ ಆಚೆಗೆ ಐಟಿ ವಲಯವನ್ನು ಕೊಂಡೊಯ್ಯುವ ಉಪಕ್ರಮವು 2026 ರ ವೇಳೆಗೆ ಕನಿಷ್ಠ 100 ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಕಂಪನಿಗಳು ಮತ್ತು 5 ಸಾವಿರ ಐಟಿ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಬೆಂಗಳೂರಿನಿಂದಾಚೆಗೆ  ಕ್ಲಸ್ಟರ್‌ಗಳಲ್ಲಿ ತರುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ಐಟಿ/ಐಟಿಇಎಸ್, ಬಿಸಿನೆಸ್ ಪ್ರೊಸೆಸಿಂಗ್ ಔಟ್‌ಸೋರ್ಸಿಂಗ್ (ಬಿಪಿಒ), ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಂ) ಮತ್ತು ಬೆಂಗಳೂರಿನಿಂದ ಹೊರಗೆ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಉದಯೋನ್ಮುಖ ತಂತ್ರಜ್ಞಾನ ಕ್ಲಸ್ಟರ್‌ಗಳಲ್ಲಿ ನೆಲೆಗೊಂಡಿರುವ ಟೆಲಿಕಾಂ ವಲಯದ ಉದ್ಯಮಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುತ್ತದೆ ಎಂದರು.

ಕರ್ನಾಟಕದಲ್ಲಿ ಐದೂವರೆ ಸಾವಿರಕ್ಕೂ ಅಧಿಕ ಐಟಿ/ಐಟಿಇಎಸ್ ಕಂಪೆನಿಗಳಿದ್ದು, 58 ಲಕ್ಷ ಕೋಟಿಗಿಂತಲೂ ಅಧಿಕ ಆದಾಯವನ್ನು ರಾಜ್ಯಕ್ಕೆ ನೀಡುತ್ತಿದೆ.  ಐಟಿ ಉದ್ಯಮ ವಲಯವನ್ನು ಬೆಂಗಳೂರಿನಿಂದ ಹೊರಗೆ ಬೇರೆ ಜಿಲ್ಲೆಗಳತ್ತ ಕೊಂಡೊಯ್ಯಲು ಸರ್ಕಾರ ಗಮನಹರಿಸುತ್ತಿದೆ ಎಂದು ಸಚಿವರು ಹೇಳಿದರು.

ಐಟಿ ವಲಯದಿಂದ 60 ಲಕ್ಷ ಉದ್ಯೋಗ ಸೃಷ್ಟಿಗೆ ಸರ್ಕಾರ ಗುರಿ: ಬೆಂಗಳೂರು ಸೇರಿದಂತೆ ಬೇರೆ ನಗರಗಳಲ್ಲಿ ಹೂಡಿಕೆ ಮಾಡುವ ಕಂಪೆನಿಗಳಿಗೆ ಸರ್ಕಾರ ಹಲವು ಪ್ರೋತ್ಸಾಹಕಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಈ ಪ್ರೋತ್ಸಾಹಕಗಳಿಂದ ಮುಂದಿನ 5 ವರ್ಷಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಸ್ಟಾರ್ಟ್ ಅಪ್ ಗಳಲ್ಲಿ, ಐಟಿ ಮತ್ತು ಐಟಿಯೇತರ ಕಂಪೆನಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಈ ವರ್ಷದ ಟೆಕ್ ಸಮ್ಮಿತ್ ನಲ್ಲಿ ಏನಿರಲಿದೆ?: ಇದೇ 17ರಿಂದ 19ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಸಮ್ಮಿತ್ ನ ಪ್ರಮುಖ ಧ್ಯೇಯ ಬೆಂಗಳೂರಿನಿಂದಾಚೆಗೆ ಎಂಬುದಾಗಿದ್ದು, ಕರ್ನಾಟಕದ ಬೇರೆ ನಗರ, ಬೇರೆ ಊರುಗಳಲ್ಲಿ ಐಟಿ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕೆಂಬುದಾಗಿದೆ. ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಪಾರ್ಟ್ನರ್ಸ್ ಮತ್ತು ಗಲ್ಫ್ ಕಾರ್ಪೊರೇಷನ್ ಕೌನ್ಸಿಲ್ ನ ಹೂಡಿಕೆದಾರರು ಕೂಡ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಒಲವು ತೋರಿಸಿದ್ದಾರೆ ಎಂದರು.

ಕರ್ನಾಟಕವು ಅವಕಾಶಗಳ ನಾಡು ನಮ್ಮ ಸ್ಪರ್ಧಿಗಳು ಬೇರೆ ರಾಜ್ಯಗಳಲ್ಲ, ಬೇರೆ ದೇಶಗಳು ಎಂದು ಹೇಳಿದ ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ, ಈ ವರ್ಷದ ಟೆಕ್ ಸಮ್ಮಿತ್ ನ್ನು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಉದ್ಘಾಟಿಸಲಿದ್ದಾರೆ ಮತ್ತು ಆಸ್ಟ್ರೇಲಿಯಾ ಮತ್ತು ಇಸ್ರೇಲ್‌ನ ಪ್ರಧಾನ ಮಂತ್ರಿಗಳು ವರ್ಚುವಲ್ ಮೂಲಕ ಭಾಗವಹಿಸಲಿದ್ದಾರೆ ಎಂದರು.

SCROLL FOR NEXT