ರಾಜ್ಯ

ಬಿಟಿಎಸ್ 2021: ಉದ್ಯಮ ಕ್ಷೇತ್ರ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು- ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Prasad SN

ಬೆಂಗಳೂರು: ಉದ್ಯಮ ಕ್ಷೇತ್ರದಲ್ಲಿ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಐಟಿ - ಬಿಟಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೆಂಗಳೂರು ತಂತ್ರಜ್ಞಾನ ಶೃಂಗ (ಬಿಟಿಎಸ್ 2021) ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗ ಉದ್ಘಾಟನೆ ಮಾಡಿದ ವೆಂಕಯ್ಯನಾಯ್ಡು ಇತ್ತೀಚಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಇದರಿಂದ ಪಾಠ ಕಲಿತು ಎಲ್ಲ ಕ್ಷೇತ್ರಗಳು ಸುಧಾರಣೆಗೊಳ್ಳಬೇಕು. ಈ ನಿಟ್ಟಿನಲ್ಲಿ ಬಿಟಿಎಸ್ 2021ಒಂದು ಅತ್ಯುತ್ತಮ ವೇದಿಕೆಯಾಗಿದೆ. ಜಗತ್ತಿನ ಎಲ್ಲ ನಾಯಕರು ಒಂದಾಗುವ ಅವಕಾಶ ಇದೆ ಎಂದರು. ವಿಶ್ವದ ಎಲ್ಲ ಅತಿದೊಡ್ಡ ಸಂಸ್ಥೆಗಳ ನಾಯಕತ್ವದಲ್ಲಿ ಭಾರತೀಯರಿದ್ದಾರೆ. ಇದು ಭಾರತೀಯರ ಜ್ಞಾನ, ಶ್ರಮವನ್ನು ಸಾರಿ ಹೇಳುತ್ತಿದೆ. ಮುಂಬರುವ ದಿನಗಳಲ್ಲಿ ಜ್ಞಾನಾರ್ಜನೆ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದ ಅವರು, ಇಡೀ ದೇಶ ಡಿಜಿಟಲ್ ಇಂಡಿಯಾದತ್ತ ಮುನ್ನುಗ್ಗುತ್ತಿದೆ. ಇದರಿಂದ ನೇರ ಹೂಡಿಕೆಯಲ್ಲಿ ಹೆಚ್ಚು ಪ್ರಗತಿ ಆಗುತ್ತಿದೆ. ಒಟ್ಟಿನಲ್ಲಿ ತಂತ್ರಜ್ಞಾನ ಜನ ಸಾಮಾನ್ಯನಿಗೆ ತಲುಪುವುದು ಮುಖ್ಯವಾಗಿದೆ. ಭಾರತ ಈ ಹಾದಿಯಲ್ಲಿ ನಡೆಯುತ್ತಿದೆ ಎಂದರು

ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂತಾಪ ಸೂಚಿಸಿದರು. ಪುನೀತ್ ರಾಜ್‌ಕುಮಾರ್ ಮನುಷ್ಯತ್ವ ಹೊಂದಿದ್ದ ಉತ್ತಮ ನಟ ಎಂದು ಗುಣಗಾನಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ತಂತ್ರಜ್ಞಾನದಲ್ಲಿ ರಾಜ್ಯ ಬಹಳ ಮುಂದುವರೆದಿದೆ. ಈ ವಲಯದಲ್ಲಿ ಮಹತ್ತರ ಬದಲಾವಣೆಗಳು ಇನ್ನೂ ಮುಂದೆ ಆಗಬೇಕಿದೆ. ಯಾವುದೇ ಆವಿಷ್ಕಾರಗಳು ಒಬ್ಬ ಮನುಷ್ಯನಿಂದಲೇ ಆರಂಭವಾಗುವುದು. ನಂತರ ಅದು ಜಗತ್ತಿಗೆ ನೆರವಾಗುತ್ತದೆ. ಜಗತ್ತು ಆ ತಂತ್ರಜ್ಞಾನವನ್ನು ಬಳಸುತ್ತದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು ತಂತ್ರಜ್ಞಾನದ ಹಬ್ ಆಗಿದೆ ಎಂದು ತಿಳಿಸಿದರು. ಇಲ್ಲಿ ಅಂಥ ಆವಿಷ್ಕಾರ ಮಾಡುವ ಮಾನವ ಸಂಪನ್ಮೂಲ ಇದೆ. ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಇನ್ನಷ್ಟು ಯಶಸ್ಸಾಗುವಂತೆ ಮಾಡುವ ಗುರಿ ಹೊಂದಿದ್ದೇವೆ. ರಾಜ್ಯದ ಪಾಲಿಸಿಗಳು ದೂರದೃಷ್ಟಿಯುಳ್ಳದ್ದಾಗಿವೆ, ಕರ್ನಾಟಕವನ್ನು ತಂತ್ರಜ್ಞಾನದಲ್ಲಿ ನಾಯಕ ರಾಜ್ಯ ಎನ್ನಬಹುದು ಎಂದು ಹೇಳಿದರು.

SCROLL FOR NEXT