ರಾಜ್ಯ

ನಿರಂತರ ಮಳೆಗೆ ಬೆಂಗಳೂರು ತತ್ತರ: ಎಲ್ಲೆಲ್ಲೂ ಅವಾಂತರ ಸೃಷ್ಟಿ!

Manjula VN

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಜನತೆ ತತ್ತರಿಸಿ ಹೋಗಿದ್ದು, ಎಲ್ಲೆಲ್ಲೂ ಅವಾಂತರಗಳೇ ಸೃಷ್ಟಿಯಾಗಿದೆ.

ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ತಡರಾತ್ರಿ ವರೆಗೂ ಸುರಿದ ಮಳೆಯಿಂದ ಇಡೀ ನಗರ ತೊಯ್ದು ಹೋಗಿತ್ತು. ಸತತ ಮಳೆಯಿಂದ ಹಲವೆಡೆ ಮರಗಳು ಮುರಿದು ಬಿದ್ದಿರುವುಡು, ಕಟ್ಟಡಗಳು ಕುಸಿದು ಬಿದ್ದಿರುವುದು ಕಂಡು ಬಂದಿದೆ.

ಇನ್ನು ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿದ್ದು, ಬಿಬಿಎಂಪಿಯಿಂದ ಸ್ಪಂದನೆಗಳು ವ್ಯಕ್ತವಾಗದ ಹಿನ್ನೆಲೆಯಲ್ಲಿ ತಾವೇ ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರ ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು.

ಬಸವನಪುರ ಮುಖ್ಯ ರಸ್ತೆಯ ಜನವಸತಿ ಪ್ರದೇಶದಲ್ಲಿ ಮೊಣಕಾಲು ಮಟ್ಟದವರೆಗೂ ನೀರು ತುಂಬಿರುವುದು ಕಂಡು ಬಂದಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ದೂರು ನೀಡಿದ್ದರೂ, ಯಾವುದೇ ಸ್ಪಂದನೆಗಳು ವ್ಯಕ್ತವಾಗದ ಕಾರಣ ಸ್ಥಳೀಯ ನಿವಾಸಿಗಳೇ ನೀರನ್ನು ಹೊರ ಹಾಕುವ ಪ್ರಯತ್ನಗಳನ್ನು ಮಾಡಿದರು.

ಭಾರೀ ಮಳೆಯಿಂದಾಗಿ ಮಣ್ಣು ಹಾಗೂ ಕಲ್ಲುಗಳಿಂದ ಚರಂಡಿ ನೀರು ಮುಂದೆ ಸಾಗದೆ ನಿಂತಿತ್ತು. ಈ ವೇಳೆ ಹಣ್ಣು ವ್ಯಾಪಾರಿಗಳು ಹಾಗೂ ಸ್ಥಳದಲ್ಲಿದ್ದ ಕೆಲ ಜನರು ಎಲ್ಲರೂ ಸೇರಿಕೊಂಡು ಚರಂಡಿ ನೀರನ್ನು ತೆರವುಗೊಳಿಸಿದರು, ದೂರು ನೀಡಿದರು ಬಿಬಿಎಂಪಿಯಿಂದ ಯಾವುದೇ ಸ್ಪಂದನೆಗಳೂ ಸಿಗಲಿಲ್ಲ ಎಂದು ಬಸವನಪುರದ ನಿವಾಸಿ ನಿಶಾಂತ್ ಜಿ ಎಂಬುವವರು ಹೇಳಿದ್ದಾರೆ.

ಬಸವನಪುರದಲ್ಲಿ ಅಷ್ಟೇ ಅಲ್ಲದೆ, ಮಹದೇವಪುರದ ಜುನ್ನಿಸಂದ್ರ ಮತ್ತು ಗ್ರೀನ್ ವಿಲ್ಲಾ ಲೇಔಟ್‌ನಲ್ಲಿಯೂ ಭಾರಿ ಪ್ರಮಾಣದ ನೀರು ತುಂಬಿರುವುದು ಕಂಡು ಬಂದಿತ್ತು. ಭಾರೀ ಮಳೆಯಿಂದಾಗಿ ಈ ಪ್ರದೇಶದಲ್ಲಿ ನಿತ್ಯ ಚರಂಡಿ ನೀರು ಉಕ್ಕಿ ಹರಿಯುತ್ತಿದೆ. ಬೆಳ್ಳಂದೂರಿನ ರೇನ್‌ಬೋ ಡ್ರೈವ್ ಮತ್ತು ಯಲಹಂಕದ ಕೇಂದ್ರೀಯ ವಿಹಾರ್‌ನಂತಹ ಅಪಾರ್ಟ್‌ಮೆಂಟ್‌ಗಳು ಕೂಡ ಜಲಾವೃತವಾಗಿದ್ದು, ಸೊಂಟದವರೆಗೆ ನೀರು ತುಂಬಿರುವ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಮಲ್ಲಸಂದ್ರದ ಕೆರೆ ತುಂಬಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಹುಳಿಮಾವು ಮೆಟ್ರೋ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಎದುರಾಗಿತ್ತು.

ಹುಳಿಮಾವು, ಕೆಆರ್ ಪುರಂ, ಮಾರತ್ತಹಳ್ಳಿ ಮುಂತಾದ ಕಡೆಗಳಲ್ಲಿ ಭಾರಿ ಪ್ರಮಾಣದ ನೀರು ತುಂಬಿರುವುದು ಕಂಡು ಬಂದಿತ್ತು. ಪರಿಣಾಮ ಮಾರತ್ತಹಳ್ಳಿ ಕೆಳಸೇತುವೆ, ಐಟಿಐ, ಟಿನ್ ಫ್ಯಾಕ್ಟರಿ ಸಂಚಾರಕ್ಕೆ ಭಾರೀ ಸಮಸ್ಯೆಗಳು ಸೃಷ್ಟಿಯಾಗಿದ್ದವು ಎಂದು ನಿಶಾಂತ್ ಅವರು ತಿಳಿಸಿದ್ದಾರೆ.

ಮಾರತ್ತಹಳ್ಳಿ ಅಂಡರ್ ಪಾಸ್ ಜೊತೆಗೆ ಕೆಆರ್ ಪುರಂ ಅಂಡರ್ ಪಾಸ್ ಕೂಡ ಸಂಪೂರ್ಣ ಜಲಾವೃತಗೊಂಡಿದೆ. ಇನ್ನು ನಿನ್ನೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ಹಲಸೂರು ವಾರ್ಡ್'ನ ಮಿಲ್ಕ್ ಮ್ಯಾನ್ ರಸ್ತೆಯಲ್ಲಿ ಸುಮಾರು 50 ವರ್ಷದ ಹಳೆಯದಾದ ಕಟ್ಟಡದ ನೆಲ ಮತ್ತು ಮೊದಲ ಮಹಡಿಯ ಕಟ್ಟಡವು ಕುಸಿದು ಬಿದ್ದಿತ್ತು. ಈ ಕಟ್ಟಡದಲ್ಲಿ ಯಾರೂ ವಾಸವಿರಲಿಲ್ಲ. ಈ ಕಟ್ಟಡವನ್ನು ಮಣ್ಣು ಹಾಗೂ ಇಟ್ಟಿಗೆಯಿಂದ ನಿರ್ಮಿಸಲಾಗಿತ್ತು. ಶಿಥಿಲಗೊಂಡಿದ್ದ ಈ ಕಟ್ಟಡಕ್ಕೆ ಪಾಲಿಕೆ ಈಗಾಗಲೇ ನೋಟಿಸ್ ನೀಡಿ ಮಾಲೀಕರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಲಾಗಿತ್ತು.

ಕಟ್ಟಡ ಕುಸಿದ ವೇಳೆ ಯಾವುದೇ ಪ್ರಾಣಹಾನಿಯಾಗಿಲ್ಲ. ಕಟ್ಟಡದ ಭಗ್ನಾವಶೇಷಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು.

ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಭೇಟಿ ನೀಡಿ ಪರಿಶೀಲಿಸಿದರು. ಶಿಥಿಲಗೊಂಡ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡುವಂತೆ ತಿಳಿಸಿದರು. ಅಂತೆಯೇ ಇದೇ ಸ್ಧಳದಲ್ಲಿ ಇನ್ನೆರಡು ಕಟ್ಟಡಗಳು ಶಿಥಿಲಗೊಂಡಿದ್ದು, ಅವುಗಳನ್ನು ಕೂಡ ನೆಲಸಮಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್.ಟಿ.ನಗರ ಹಾಗೂ ಟ್ರಿನಿಟಿ ವೃತ್ತದ ಬಳಿ ಶುಕ್ರವಾರ ಎರಡು ಮರಗಳು ಉರುಳಿ ಬಿದ್ದಿವೆ. ನಂದಿನಿ ಲೇಔಟ್, ಪಾಂಡುರಂಗನಗರ, ಆರ್.ಆರ್.ನಗರ, ಮಹಾಲಕ್ಷ್ಮೀಪುರಂ ಲೇಔಟ್ ಮತ್ತು ಸುಬ್ರಹ್ಮಣ್ಯ ಲೇಔಟ್‌ನಲ್ಲಿ ಕಾಂಪೌಂಡ್ ಗೋಡೆಗಳು ಮತ್ತು ಶಿಥಿಲವಾದ ಮನೆ ಗೋಡೆಗಳು ಕುಸಿದು ಬಿದ್ದಿರುವ ವರದಿಯಾಗಿವೆ.

ಹೇರೋಹಳ್ಳಿಯಲ್ಲೂ ಮಣ್ಣಿನ ಗುಡಿಸಲು ಕುಸಿದಿದೆ ಎನ್ನಲಾಗುತ್ತಿದ್ದು, ಮಹದೇವಪುರ ಹಾಗೂ ಛಲವಾದಿಪಾಳ್ಯ ಸೇರಿದಂತೆ ಹಲವು ಕಡೆ ನೀರು ತುಂಬಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ.

SCROLL FOR NEXT