ರಾಜ್ಯ

ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿಎಸ್ ರುದ್ರೇಶಪ್ಪ ಎಸಿಬಿ ವಶಕ್ಕೆ: ತೀವ್ರ ವಿಚಾರಣೆ

Sumana Upadhyaya

ಬೆಂಗಳೂರು/ಗದಗ: ಅಕ್ರಮ ಆಸ್ತಿ ಗಳಿಕೆಯ ಮಾಹಿತಿ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ರಾಜ್ಯದ 15 ಅಧಿಕಾರಿಗಳ ನಿವಾಸ ಮೇಲೆ ನಿನ್ನೆ ಬೆಳಗ್ಗೆ ದಾಳಿ ಮಾಡಿದ ವೇಳೆ ಅಪಾರ ಪ್ರಮಾಣದ ಆಸ್ತಿ, ನಗ-ನಾಣ್ಯ ಸಿಕ್ಕಿದ್ದು ನೋಡಿ ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದರು.

ಇವರಲ್ಲಿ ಗದಗ ಜಿಲ್ಲೆಯ ಕೃಷಿ ಇಲಾಖೆಟ ಜಂಟಿ ನಿರ್ದೇಶಕ ಟಿ ಎಸ್ ರುದ್ರೇಶಪ್ಪ ಅವರ ಮನೆಯಲ್ಲಿಯೂ ಆದಾಯ ಮೂಲಕ್ಕಿಂತ ಅಪಾರ ಪ್ರಮಾಣದ ಆಸ್ತಿ ಸಂಪತ್ತು ಸಿಕ್ಕಿದ್ದರಿಂದ ತೀವ್ರ ಶೋಧ ನಡೆಸಿದ ಅಧಿಕಾರಿಗಳು ನಿನ್ನೆ ರಾತ್ರಿ ರುದ್ರೇಶಪ್ಪ ಅವರನ್ನು ವಶಕ್ಕೆ ಪಡೆದರು. 

ರಾತ್ರಿಯಿಡೀ ಎಸಿಬಿ ಕಚೇರಿಯಲ್ಲಿ ಕಾಲ ಕಳೆದ ರುದ್ರೇಶಪ್ಪ ಅವರು ತೀವ್ರ ವಿಚಾರಣೆಗೆ ಒಳಗಾಗಿದ್ದಾರೆ. ಅವರ ಶಿವಮೊಗ್ಗದ ಚಾಲುಕ್ಯನಗರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ. ಇವರ ಬಳಿ ಶಿವಮೊಗ್ಗದಲ್ಲಿ 2 ಮನೆ, 4 ನಿವೇಶನ, 9.400 ಕೆಜಿ ಚಿನ್ನಾಭರಣಗಳು, 3 ಕೆಜಿ ಬೆಳ್ಳಿ ವಸ್ತುಗಳು, 2 ಕಾರುಗಳು, 3 ದ್ವಿಚಕ್ರ ವಾಹನಗಳು, 8 ಎಕರೆ ಜಮೀನು, 15.94 ಲಕ್ಷ ನಗದು, 20 ಲಕ್ಷಕ್ಕೂ ಅಧಿಕ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸಿಕ್ಕಿದೆ. 

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದಲ್ಲಿ ನಿನ್ನೆ ಬೆಳಗ್ಗೆ ರಾಜ್ಯದ 15 ಕ್ಕೂ ಹೆಚ್ಚು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಮತ್ತು ಅವರ ಆಪ್ತರ ಮನೆ ಸೇರಿದಂತೆ ಸುಮಾರು 68 ಸ್ಥಳಗಳ ಮೇಲೆ ದಾಳಿ ನಡೆಸಿ, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಬಾರಿ ಅಕ್ರಮ ಸಂಪತ್ತು ಕೂಡಿಟ್ಟವರಿಗೆ ಗ್ರಹಚಾರ ಕಾದಿರುವಂತೆ ಕಾಣುತ್ತಿದೆ, ಅಗತ್ಯಬಿದ್ದರೆ ಎಸಿಬಿ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.

SCROLL FOR NEXT