ರಾಜ್ಯ

ಕೆಂಪೇಗೌಡ ವಿಮಾನ ನಿಲ್ದಾಣದ ರೆಡ್ ಜೋನ್ ವಲಯದಲ್ಲಿ ಐಸಿಎಂಆರ್ ನಿಂದ ಡ್ರೋನ್ ಹಾರಾಟ: ಕೇಸು ದಾಖಲಿಸಲು ಕೋರ್ಟ್ ಅನುಮತಿಗೆ ಕಾಯುತ್ತಿರುವ ಪೊಲೀಸರು

Sumana Upadhyaya

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮತ್ತು ಅದರ ಸೋದರ ಸಂಸ್ಥೆ ಕಳೆದ ಮಂಗಳವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ರೆಡ್ ಜೋನ್ ವಲಯದಲ್ಲಿ(ಕೆಪು ವಲಯ) ಡ್ರೋನ್ ಹಾರಿಸಿ ಸಮಸ್ಯೆಗೆ ಸಿಲುಕಿಹಾಕಿಕೊಂಡಿದೆ. 

ವಿಮಾನ ನಿಲ್ದಾಣದ 5 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ನಿರ್ದಿಷ್ಟ ಹಾರಾಟದ ವಸ್ತುವನ್ನು ಹಾರಿಸಬಾರದು ಎಂಬ ನಿಯಮದ ಉಲ್ಲಂಘನೆಯಾಗಿದೆ. ಪೂಜನಹಳ್ಳಿ ರಸ್ತೆಯಲ್ಲಿರುವ ಐಸಿಎಂಆರ್ ಕ್ಯಾಂಪಸ್‌ನಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಟ್ರಂಪೆಟ್‌ಗೆ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ (ಎನ್‌ಸಿಡಿಐಆರ್) ಈ ತಪ್ಪನ್ನು ಎಸಗಿದೆ. ಏರ್‌ಪೋರ್ಟ್ ಪೊಲೀಸರು ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಿ ಐಸಿಎಂಆರ್(ICMR) ಮತ್ತು ಎನ್ ಸಿಡಿಐಆರ್(NCDIR) ವಿರುದ್ಧ ಪ್ರಕರಣವನ್ನು ದಾಖಲಿಸಲು ಅನುಮತಿಗಾಗಿ ಕಾಯುತ್ತಿದ್ದಾರೆ. ಐಸಿಎಂಆರ್ ಬಯೋಮೆಡಿಕಲ್ ಸಂಶೋಧನೆಯ ಉತ್ತೇಜನಕ್ಕಾಗಿ ಇರುವ ಉನ್ನತ ಸಂಸ್ಥೆಯಾಗಿದೆ.

ರೆಡ್ ಜೋನ್ ಅತಿಕ್ರಮಿಸಿ ಹೋಗುವುದು ಸೂಕ್ಷ್ಮ ವಿಚಾರಃ ಅಧಿಕಾರಿಗಳು: ನಮ್ಮ 5-ಎಕರೆ ಕ್ಯಾಂಪಸ್‌ನಲ್ಲಿ ನಮ್ಮ ಸಂಸ್ಥೆಯ ಉದ್ದೇಶಕ್ಕೆ ವೀಡಿಯೊ ಮಾಡಲು ನಾವು ಏಜೆನ್ಸಿಯನ್ನು ನೇಮಿಸಿಕೊಂಡಿದ್ದೇವೆ. ಇದು ನಮ್ಮ ಆವರಣದೊಳಗೆ ಮಾಡಬೇಕಿತ್ತು. ಮೊನ್ನೆ ಮಂಗಳವಾರ ಮಧ್ಯಾಹ್ನ ಡ್ರೋನ್ ದೂರ ಸರಿದು ವಿಮಾನ ನಿಲ್ದಾಣದ ಸಮೀಪಕ್ಕೆ ಹೋಗಿದೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಏಜೆನ್ಸಿಗಳು ಡ್ರೋನ್ ಅನ್ನು ತಕ್ಷಣ ಗಮನಿಸಿ ಅದನ್ನು ಕೆಳಗೆ ಹಾರಿಸಲಾಯಿತು. ವಿಮಾನ ನಿಲ್ದಾಣದ ಬಳಿ ಡ್ರೋನ್ ಕಾರ್ಯನಿರ್ವಹಿಸಲು ಅನುಮತಿ ಅಗತ್ಯವಿದೆ, ಅದನ್ನು ನಾವು ತೆಗೆದುಕೊಂಡಿರಲಿಲ್ಲ ಎಂದು ಐಸಿಎಂಆರ್ ನ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಇಂತಹ ಅತಿಕ್ರಮಣ ಸೂಕ್ಷ್ಮ ವಿಚಾರವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಉನ್ನತ ಭದ್ರತಾಧಿಕಾರಿಯೊಬ್ಬರು ಹೇಳುತ್ತಾರೆ.

ಡ್ರೋನ್ ಕೆಂಪು ವಲಯವನ್ನು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಕ್ಕಾಗಿ ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿ ಪಡೆಯಬೇಕು. ಕಳೆದ 45 ದಿನಗಳಲ್ಲಿ ರೆಡ್ ಝೋನ್ ನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಈ ಹಿಂದೆ ಕೂಡ ಸರ್ಕಾರಿ ಸಂಸ್ಥೆಯೇ ಈ ರೀತಿ ಉಲ್ಲಂಘಿಸಿದೆ ಎಂದು ಹೆಚ್ಚಿನ ವಿವರ ನೀಡದೆ ಹೇಳಿದರು.

ಈ ಪ್ರಕರಣವನ್ನು ದೇವನಹಳ್ಳಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂದೆ ಇಡಲಾಗುವುದು. ಅದು ನಮಗೆ ಅನುಮತಿ ನೀಡಿದ ತಕ್ಷಣ, ನಾವು ಪ್ರಕರಣದ ಮುಂದಿನ ಪ್ರಕ್ರಿಯೆಗೆ ಮುಂದುವರಿಯುತ್ತೇವೆ. ಸರ್ಕಾರದ ಸುತ್ತೋಲೆಯ ಉಲ್ಲಂಘನೆಗಾಗಿ NCDIR ಮತ್ತು ICMR ಎರಡರ ವಿರುದ್ಧ CrPC ಯ ಸೆಕ್ಷನ್ 188 ರ ಅಡಿಯಲ್ಲಿ ಎಫ್‌ಐಆರ್ ಅನ್ನು ದಾಖಲಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಸಿಎಂಆರ್ ಸರ್ಕಾರ ಸಂಸ್ಥೆಯಾಗಿರುವುದರಿಂದ ದೂರು ದಾಖಲಿಸಲು ನ್ಯಾಯಾಲಯದ ಅನುಮತಿ ಬೇಕಾಗುತ್ತದೆ. 

SCROLL FOR NEXT