ರಾಜ್ಯ

ಸಚಿವ ಸಂಪುಟದ ನಿರ್ಣಯದಂತೆ ಟೆಂಡರ್ ಪರಿಶೀಲನೆಗೆ ಎರಡು ಸಮಿತಿಗಳ ರಚನೆ: ಸಿಎಂ

Srinivas Rao BV

ಬೆಂಗಳೂರು: ಸಚಿವ ಸಂಪುಟದ ನಿರ್ಣಯದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಟೆಂಡರ್ ಅಂದಾಜು ಹಾಗೂ ಟೆಂಡರ್ ನಿಬಂಧನೆಗಳ ಪರಿಶೀಲನೆಗಾಗಿ ಎರಡು ಸಮಿತಿಗಳನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತಂದು, ವಿಚಾರಣೆ ನಡೆಸಿ,ಯಾವುದೇ ತಪ್ಪು ಕಂಡುಬಂದಲ್ಲಿ, ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ನನ್ನ ಸರ್ಕಾರ ಬಂದ ಮೇಲೆ ಯಾವುದೇ ಟೆಂಡರ್ ಅಂತಿಮವಾಗಿದ್ದರೆ ಅದನ್ನು ವಿಶೇಷವಾಗಿ ಪರಿಶೀಲನೆ ಮಾಡಬೇಕೆಂದು ಸೂಚಿಸಲಾಗಿದೆ. ಗುತ್ತಿಗೆದಾರರು ಪೂರೈಸಿದ ಕಾಮಗಾರಿ, ಸೀನಿಯಾರಿಟಿ ಆಧಾರದ ಮೇಲೆ ಸ್ವಯಂಚಾಲಿತವಾಗಿ ಬಿಲ್ ಬರುವಂತೆ ವ್ಯವಸ್ಥೆ ಮಾಡಲಾಗುವುದು. ಯಾವುದೇ ಟೆಂಡರ್ ವೇಳಾಪಟ್ಟಿಯೊಳಗೆ ಟೆಂಡರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಇಲ್ಲವಾದಲ್ಲಿ ವೃಥಾ ಸಂಶಯಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ, ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಟೆಂಡರ್  ಪ್ರಕ್ರಿಯೆಯಲ್ಲಿ ಅವ್ಯವಹಾರವಾಗಿದ್ದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಸತ್ಯ ಹೊರಬೀಳುತ್ತದೆ. ಆದರೆ ಗುತ್ತಿಗೆದಾರರ ಪತ್ರದಲ್ಲಿ ಇಂತಹ ಯಾವುದೇ ಪ್ರಕರಣದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೂ ಈ ಬಗ್ಗೆ ವಿಚಾರಣೆ ನಡೆಸಲು ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ಬೆಳೆ ಹಾನಿ ಪರಿಹಾರ:
ರಾಗಿ ಜೋಳ ಭತ್ತ ಶೇಂಗಾ  ಹಾಗೂ ತರಕಾರಿ ಹಲವಾರು ಬೆಳೆಗಳು ನಾಶವಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ  ಬೆಳೆ ಹಾನಿಯ ಸರ್ವೇಯಾಗಿ ಪರಿಹಾರ ಆ್ಯಪ್ನಲ್ಲಿ ಲೋಡ್ ಆದ ತಕ್ಷಣವೇ ಕೂಡಲೇ ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮೆಯಾಗುತ್ತದೆ.  ರೈತರ ಖಾತೆಗೆ ಪರಿಹಾರದ ಹಣ ಕೂಡಲೇ ವರ್ಗಾಯಿಸುವುದು ಹಾಗೂ ಹಣ ಕೊರತೆಯಾದ ಸಂದರ್ಭದಲ್ಲಿ ತಕ್ಷಣ ಹಣಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಕಾರ್ಯದರ್ಶಿಗಳಿಗೆ ಈಗಾಗಲೇ ತಿಳಿಸಲಾಗಿದೆ. ಒಟ್ಟಾರೆ  ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ಪರಿಹಾರವನ್ನು ತಕ್ಷಣ ನೀಡಲು ಎಲ್ಲಾ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ತಿಳಿಸಿದರು.

SCROLL FOR NEXT