ರಾಜ್ಯ

ಬೆಂಗಳೂರಿನಲ್ಲಿ ಭಾರೀ ಶಬ್ದ; ಕಂಪನದ ಅನುಭವದಿಂದ ಬೆಚ್ಚಿಬಿದ್ದ ಜನತೆ, ಭೂಕಂಪನ ಮಾಪನ ಇಲಾಖೆ ಹೇಳಿದ್ದೇನು?

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ನಿಗೂಢ ಭಾರಿ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿದ (Earth Quake)ಅನುಭವವಾಗಿದೆ ಎಂದು ಹಲವರು ಬೆಚ್ಚಿಬಿದ್ದ ಘಟನೆ ನಡೆದಿದೆ.

ಬೆಂಗಳೂರಿನ ಕೆಂಗೇರಿ, ಕಗ್ಗಲೀಪುರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದಂತ ಅನುಭವ ಆಗಿದ್ದು, ಮಾತ್ರವಲ್ಲದೇ ಭಾರಿ ಶಬ್ಧಕೂಡ ಕೇಳಿಬಂದಿದೆ. ನಗರದ ಪಶ್ಚಿಮ ಭಾಗದಲ್ಲಿ ಅನೇಕ ಬೆಂಗಳೂರಿಗರಿಗರಿಗೆ ಕಂಪನದ ಅನುಭವಾಗಿದ್ದು, ಸ್ಥಳೀಯರು ದೊಡ್ಡ ಸ್ಫೋಟದ ಶಬ್ದವನ್ನು ಕೇಳಿದ್ದಾರೆ.  ಭೂಮಿ ಕಂಪಿಸಿದಂತ ಅನುಭವದಿಂದಾಗಿ ಬೆಂಗಳೂರಿನ ಜನರು ಬೆಚ್ಚಿ ಬಿದ್ದಿದ್ದಾರೆ. ಕೆಲವೆಡೆ ಮನೆಯಿಂದ ಹೊರ ಓಡಿ ಬಂದಂತ ಜನರು, ಆತಂಕದಲ್ಲಿ ಕೆಲ ಕಾಲ ಕಳೆಯುವಂತೆ ಆಗಿದೆ. 

ಭೂಕಂಪನ ಮಾಪನ ಇಲಾಖೆ ಹೇಳಿದ್ದೇನು?
ಇನ್ನು ಭೂಕಂಪನ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಈ ಸಂಬಂಧ ರಾಜ್ಯ ಭೂಕಂಪನ ಮಾಪನ ಇಲಾಖೆ ಕೂಡ ಪ್ರತಿಕ್ರಿಯೆ ನೀಡಿದ್ದು, ನಗರದಲ್ಲಿ ಯಾವುದೇ ರೀತಿಯ ಭೂಕಂಪನ ದಾಖಲಾಗಿಲ್ಲ. ಯಾವುದೇ ಭೂಕಂಪ ಅಥವಾ ಅಂತಹ ಚಟುವಟಿಕೆ ವರದಿಯಾಗಿಲ್ಲ  ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC), ಯಾವುದೇ ಭೂಕಂಪ ಅಥವಾ ಅಂತಹ ಚಟುವಟಿಕೆ ವರದಿಯಾಗಿಲ್ಲ. ಆದರೆ ಸ್ಥಳೀಯ ನಿವಾಸಿಗಳಿಂದ ಸೌಮ್ಯವಾದ ಕಂಪನಗಳಿಗೆ ಸಂಬಂಧಿಸಿದ ಧ್ವನಿಯ ವರದಿಗಳನ್ನು ಸ್ವೀಕರಿಸಲಾಗಿದೆ. ಬೆಂಗಳೂರಿನ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ಮತ್ತು ಕಗ್ಗಲಿಪುರದಿಂದ ಬೆಳಿಗ್ಗೆ 11.50 ರಿಂದ ಮಧ್ಯಾಹ್ನ 12.15 ರವರೆಗೆ ವರದಿಯಾಗಿದೆ. ಹೇಳಲಾದ ಅವಧಿಯಲ್ಲಿ ಯಾವುದೇ ಭೂಕಂಪನ ಅಥವಾ ಸಂಭವನೀಯ ಭೂಕಂಪದ ಸಂಕೇತಗಳು ಮಾಪನದಲ್ಲಿ ದಾಖಲಾಗಿಲ್ಲ. ಆದರೂ ನಮ್ಮ ಭೂಕಂಪನ ವೀಕ್ಷಣಾಲಯಗಳಿಂದ ಡೇಟಾವನ್ನು ವಿಶ್ಲೇಷಿಸಲಾಗಿದೆ. ಆದರೆ ಕಂಪನದ ಸೀಸ್ಮೋಗ್ರಾಫ್‌ಗಳು ಇಲ್ಲ ಎಂದು ಮಾಹಿತಿ ನೀಡಿದೆ.

ಗಣಿ ಸ್ಫೋಟವೇ ಎಂದು ಪರಿಶೀಲನೆ
ಈ ಮಧ್ಯೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಪ್ರದೇಶದಲ್ಲಿ ಯಾವುದೇ ದೊಡ್ಡ ಪ್ರಮಾಣದ ಬ್ಲಾಸ್ಟಿಂಗ್ (ಸ್ಫೋಟ)ಮಾಡಿದ್ದರೆ ಅದು ಜನರಿಗೆ ಅಂತಹ ಅನುಭವವನ್ನು ಉಂಟುಮಾಡುತ್ತದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಆದರೆ ಈ ಪ್ರದೇಶದಲ್ಲಿ ಇಂತಹ ಸ್ಫೋಟಗಳಿಗೆ ಯಾವುದೇ ಅನುಮತಿ ನೀಡಲಾಗಿಲ್ಲ. ಅದಾಗ್ಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಕೂಡ ಅಲರ್ಟ್ ಆಗಿದ್ದು, ಕಾರಣ ಏನಿರಬಹುದು ಎಂದು ಪರಿಶೀಲಿಸುತ್ತಿದ್ದಾರೆ. 
 

ಭಾರತ- ಬರ್ಮಾ ಗಡಿಯಲ್ಲಿ ಭೂಕಂಪನ
ಏತನ್ಮಧ್ಯೆಭಾರತ- ಬರ್ಮಾ ಗಡಿಯಲ್ಲಿ ಭೂಕಂಪನ ವಾಗಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.1 ಎಂದು ದಾಖಲಾಗಿದೆ. ಆದರೆ ಕಂಪನದಿಂದ ಸದ್ಯ ಯಾವುದೇ ಜೀವಹಾನಿ, ಆಸ್ತಿ- ಪಾಸ್ತಿಗೆ ಹಾನಿಯಾದ ವರದಿಯಾಗಿಲ್ಲ. ಇಂದು ಮುಂಜಾನೆ 5-15 ರವೇಳೆಗೆ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. 

SCROLL FOR NEXT