ರಾಜ್ಯ

ಧಾರವಾಡದ ಎಸ್ ಡಿಎಂ ಕಾಲೇಜಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆ: 2 ದಿನದಲ್ಲಿ 939 ಮಂದಿಯ ಪರೀಕ್ಷೆ!

Sumana Upadhyaya

ಧಾರವಾಡ: ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ 182ಕ್ಕೇರಿದೆ. ಕಳೆದೆರಡು ದಿನಗಳಿಂದ ಕಾಲೇಜಿನಲ್ಲಿ ಒಟ್ಟು 939 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಕಾಲೇಜಿನಲ್ಲಿ ಮೂರನೇ ಹಂತದ ಕೋವಿಡ್ ಪರೀಕ್ಷೆಯ ಫಲಿತಾಂಶ ಇಂದು ಬೆಳಗ್ಗೆ ಲಭಿಸಿದ್ದು, ಇದರಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. 

ಮೊನ್ನೆ ನವೆಂಬರ್ 17ರಂದು ಎಸ್ ಡಿಎಂ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ಕೆಲವು ವಿದ್ಯಾರ್ಥಿಗಳ ಪೋಷಕರು ಸಹ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಕಾಲೇಜು ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಹಾಸ್ಟೆಲ್‌ನ 270 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ತಪಾಸಣೆ ವೇಳೆ 66 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.

ಕೋವಿಡ್ ಸೋಂಕಿನ ಹೆಚ್ಚಳ ಹಿನ್ನೆಲೆಯಲ್ಲಿ ವೈದ್ಯಕೀಯ ಕಾಲೇಜನ್ನು ಸದ್ಯ ಬಂದ್ ಮಾಡಲಾಗಿದೆ. ಇನ್ನು ಎಸ್ ಡಿಎಂ ವೈದ್ಯಕೀಯ ಆಸ್ಪತ್ರೆಯ ಹೊರರೋಗಿಗಳ ವಿಭಾಗವನ್ನು ಸಹ ಮುಚ್ಚಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಚಿಕಿತ್ಸೆ ಮುಂದುವರಿಯಲಿದೆ. ಅದಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. 

SCROLL FOR NEXT